ನಿಡಹಾಸ್ ತ್ರಿಕೋನ ಟಿ20 ಸರಣಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ
ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಪ್ರವಾಸಿ ಭಾರತ 6 ವಿಕೆಟ್ ಗಳ ಅಂತರದಲ್ಲಿ ಮಣಿಸಿದೆ.
ಕೊಲಂಬೋ: ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಪ್ರವಾಸಿ ಭಾರತ 6 ವಿಕೆಟ್ ಗಳ ಅಂತರದಲ್ಲಿ ಮಣಿಸಿದೆ.
ಶ್ರೀಲಂಕಾ ನೀಡಿದ 153 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದೆ ಭಾರತ ತಂಡ ಕೇವಲ 17.3 ಓವರ್ ಗಳಲ್ಲಿಯೇ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆ ಮೂಲಕ ಮೊದಲ ಪಂದ್ಯದ ಸೋಲಿನ ಸೇಡನ್ನು ಭಾರತ ಈ ಪಂದ್ಯದ ಗೆಲುವಿನ ಮೂಲಕ ತೀರಿಸಿಕೊಂಡಿತು.
ಕನ್ನಡಿಗ ಮನೀಷ್- ದಿನೇಶ್ ಕಾರ್ತಿಕ್ ಸಾಹಸ
ಇನ್ನು ಇಂದಿನ ಗೆಲುವಿನಲ್ಲಿ ಕನ್ನಡಿಗ ಮನೀಷ್ ಪಾಂಡೆ ಹಾಗೂ ದಿನೇಶ್ ಕಾರ್ತಿಕ್ ಅವರ ಸಮಯೋಚಿತ ಬ್ಯಾಟಿಂಗ್ ನಿರ್ಣಾಯಕ ಪಾತ್ರವಹಿಸಿತು. ಭಾರತ 3.1 ಓವರ್‌ಗಳಲ್ಲಿ 22 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ರೋಹಿತ್ ಶರ್ಮ(11)ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲು ವಿಫಲರಾದರು. ರಿಷಭ್ ಪಂತ್ ಬದಲಿಗೆ ಅವಕಾಶ ಪಡೆದಿದ್ದ ಕೆ.ಎಲ್. ರಾಹುಲ್(18) ಹಾಗೂ ಸುರೇಶ್ ರೈನಾ(27)3ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಧಾರವಾಗಿ ನಿಂತರು. ಆದರೆ ರೈನಾರನ್ನು ಔಟ್ ಮಾಡಿದ ಫೆರ್ನಾಂಡೊ ಭಾರತಕ್ಕೆ ಮತ್ತೆ ಆಘಾತ ನೀಡಿದರು.
ತಂಡ 85 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಪಾಂಡೆ(42,31 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಕಾರ್ತಿಕ್(ಅಜೇಯ 39,25 ಎಸೆತ, 5 ಬೌಂಡರಿ)5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಲಂಕಾ ಪರ ಅಖಿಲಾ ಧನಂಜಯ 2 ವಿಕೆಟ್ ಗಳಿಸಿದರೆ, ಪ್ರದೀಪ್ ಮತ್ತು ನುವಾನ್ ಮೆಂಡಿಸ್ ತಲಾ 1 ವಿಕೆಟ್ ಪಡೆದರು. ಭಾರತದ ಪರ ಬೌಲಿಂಗ್ ನಲ್ಲಿ ಲಂಕಾದ 4 ಪ್ರಮುಖ ವಿಕೆಟ್ ಪಡೆದ ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.