ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕಳಂಕಿತ ಆಟಗಾರ ಡೇವಿಡ್ ವಾರ್ನರ್, ತಮ್ಮ ತಪ್ಪಿಗೆ ಗುರುವಾರ ಕ್ಷಮೆಯಾಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ವಾರ್ನರ್, ಆಸ್ಟ್ರೇಲಿಯಾ ಹಾಗೂ ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಗೆ ಹೇಳಲು ಬಯಸುತ್ತೇನೆ. ಪ್ರಸ್ತುತ ನಾನು ಸಿಡ್ನಿಗೆ ಮರಳಿ ಹೋಗುತ್ತಿದ್ದೇನೆ. ನನ್ನ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಹಾಗೂ ತಪ್ಪಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆ. ತಪ್ಪಿನಿಂದಾಗಿ ಕ್ರೀಡೆ ಹಾಗೂ ಅಭಿಮಾನಿಗಳಿಗೆ ಎಷ್ಟು ನೋವಾಗಿದೆ ಎಂಬುದು ನನಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಕ್ರೀಡೆಯನ್ನು ನಾನು ಬಾಲಕನಿದ್ದಾಗಿನಿಂದಲೂ ಪ್ರೀತಿಸುತ್ತಿದ್ದೆ. ಇದೀಗ ನನ್ನ ತಪ್ಪಿನ ಅರಿವಾಗಿದ್ದು, ಆಳವಾದ ಉಸಿರು ತೆಗೆದುಕೊಳ್ಳಲು ಬಯಸುತ್ತಿದ್ದೇನೆ. ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಹಾಗೂ ನಂಬಿಕಸ್ಥ ಸಲಹೆಗಾರರೊಂದಿಗೆ ಕಾಲ ಕಳೆಯಲು ಇಚ್ಛಿಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಪ್ರತಿಕ್ರಿಯೆ ನೀಡುತ್ತೇನೆಂದು ತಿಳಿಸಿದ್ದಾರೆ.
ಅನೇಕ ತಿರುವುಗಳನ್ನು ಪಡೆದುಕೊಂಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರ ಚೆಂಡು ವಿರೂಪಗೊಳಿಸಿದ ಪ್ರಕರಣ, ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಅಂತ್ಯಗೊಂಡಿದೆ. ಕಳಂಕಿತ ಆಟಗಾರರಾದ ಸ್ವೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್'ಗೆ 1 ವರ್ಷ ನಿಷೇಧ ಹೇರಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಚೆಂಡು ವಿರೂಪಗೊಳಿಸಿದ್ದ ಯುವ ಆಟಗಾರ ಕ್ಯಾಮರೂನ್ ಬ್ಯಾನ್ ಕ್ರಾಫ್ಟ್'ಗೆ 9 ತಿಂಗಳ ನಿಷೇಧದ ಶಿಕ್ಷೆ ವಿಧಿಸಿದೆ. ವಾರ್ನರ್ ಹಾಗೂ ಸ್ಮಿತ್ 11ನೇ ಆವೃತ್ತಿಯ ಐಪಿಎಲ್ ನಿಂದಲೂ ವಜಾಗೊಂಡಿದ್ದಾರೆ.
ಶಿಕ್ಷೆ ಪ್ರಮಾಣ ಪ್ರಕಟ ಮಾಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಪ್ರಕರಣದ ಮೂಲ ಡೇವಿಡ್ ವಾರ್ನರ್ ಎಂದು ತಿಳಿಸಿದೆ. ಚೆಂಡು ವಿರೂಪಗೊಳಿಸುವ ಯೋಜನೆ ರೂಪಿಸಿದ್ದೇ ವಾರ್ನರ್. ಈ ಬಗ್ಗೆ ನಾಯಕ ಸ್ಮಿತ್ ಜೊತೆ ಚರ್ಚಿಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದ ವಾರ್ನರ್, ಈ ಕೃತ್ಯಕ್ಕೆ ತಮ್ಮ ಆರಂಭಿಕ ಜತೆಗಾರ ಬ್ಯಾನ್ ಕ್ರಾಫ್ಟ್'ರನ್ನು ಆಯ್ಕೆ ಮಾಡಿಕೊಂಡಲು. ಬ್ಯಾನ್ ಕ್ರಾಫ್ಟ್'ಘೆ ಸ್ಯಾಂಡ್ ಪೇಪರ್ ಬಳಲಿ ಚೆಂಡು ವಿರೂಪಗೊಳಿಸುವುದು ಹೇಗೆ ಎಂದು ತೋರಿಸಿಕೊಟ್ಟಿದ್ದು ವಾರ್ನರ್ ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಜೊತೆಗೆ ದೊಡ್ಡ ಪರದೆ ಮೇಲೆ ಬ್ಯಾನ್ ಕ್ರಾಫ್ಟ್ ದೃಶ್ಯಗಳು ಪ್ರಸಾರವಾದಾಗ, ಸ್ಯಾಂಡ್ ಪೇಪರ್ ಅನ್ನು ಒಳ ಉಡುಪಿನೊಳಗೆ ಇರಿಸಿಕೊಳ್ಳಲು ಸೂಚನೆ ನೀಡಿದ್ದು ಸ್ಮಿಕ್ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
12 ತಿಂಗಳ ಬಳಿಕ ಆಸ್ಟ್ರೇಲಿಯಾ ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಒಪ್ಪಿದರೆ, ನಾಯಕತ್ವಕ್ಕೆ ಸ್ಮಿತ್ ಹಾಗೂ ಬ್ಯಾನ್ ಕ್ರಾಫ್ಟ್ ಹೆಸರು ಪರಿಗಣಿಸುವುದಾಗಿ ಕ್ರಿಕೆಟ್ ಸ್ಪಷ್ಟಪಡಿಸಿದೆ. ಆದರೆ, ಚೆಂಡು ವಿರೂಪಗೊಳಿಸಿದ ಪ್ರಕರಣದ ಪ್ರಮುಖ ರುವಾರಿಯಾಗಿರುವ ವಾರ್ನರ್'ಗೆ ಮುಂದೆಂದೂ ನಾಯಕತ್ವದ ಹೊಮೆ ನೀಡುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಡಕ್ ಆಗಿ ಹೇಳಿದೆ.