ಕೋಲ್ಕತ್ತಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಅಂಪೈರ್ ಕಳಪೆ ಗುಣಮಟ್ಟದ ಬಗ್ಗೆ ಈಗಾಗಲೇ ಆರೋಪಗಳು ಕೇಳಿಬಂದಿದ್ದು ಇದೀಗ ಮಗದೊಂದು ಕೆಟ್ಟ ಅಂಪೈರಿಂಗ್ ದಾಖಲಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಟಾಮ್ ಕುರ್ರಾನ್ ಬೌಲಿಂಗ್ ನಲ್ಲಿ ಮೈದಾನದ ಅಂಪೈರ್ ನೋ ಬಾಲ್ ನೀಡಿದರು.
ಬಳಿಕ ದೊಡ್ಡ ಸ್ಕ್ರೀನ್ ನಲ್ಲಿ ರಿಪ್ಲೇ ತೋರಿಸಿದಾಗ ನೋ ಬಾಲ್ ಅಲ್ಲ ಎಂಬುದು ಸಾಬೀತುಗೊಂಡಿತ್ತು. ಈ ಬಗ್ಗೆ ಬೌಲರ್ ಟಾಮ್ ಹಾಗೂ ನಾಯಕ ಕಾರ್ತಿಕ್ ಅಂಪೈರ್ ಮನವೊಲಿಸಲು ಪ್ರಯತ್ನಿಸಿದರು ಆದರೆ ಇದು ಪ್ರಯೋಜನವಾಗಲಿಲ್ಲ.
ಐಸಿಸಿ ನಿಯಮಗಳ ಪ್ರಕಾರ ಸ್ಕ್ರೀನ್ ನೋಡಿ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸುವಂತಿಲ್ಲ. ಟಾಮ್ ಕಾಲು ಮೊದಲು ನೆಲವನ್ನು ಸ್ಪರ್ಶಿಸುವಾಗ ನೋ ಬಾಲ್ ಆಗಿರಲಿಲ್ಲ. ಇದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಹಾಗಿದ್ದರೂ ಅಂಪೈರ್ ನೋ ಬಾಲ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಇನ್ನೊಂದು ಚರ್ಚೆಯ ವಿಷಯವೆಂದರೆ ಇಂತಹ ಕೆಟ್ಟ ಅಂಪೈರಿಂಗ್ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಮಾಡಲಾಗಿದೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಡಿಆರ್ಎಸ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ನಾಟೌಟ್ ಎಂದು ನೀಡಲಾಗಿತ್ತು. ನಂತರ ಉಮೇಶ್ ಯಾದವ್ ಅವರ ಔಟ್ ಕುರಿತಂತೆ ಮೂರನೇ ಅಂಪೈರ್ ಮತ್ತೊಂದು ಪ್ರಮಾದವನ್ನು ಎಸಗಿದ್ದರು.