ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಐಪಿಎಲ್ ಟೂರ್ನಿ ಬಳಿಕ ಆಫ್ಘಾನಿಸ್ತಾನ ವಿರುದ್ಧ ಏಕೈಕ ಐತಿಹಾಸಿಕ ಟೆಸ್ಟ್, ಐರ್ಲೆಂಡ್ ಪ್ರವಾಸ, ಕೌಂಟಿ ಕ್ರಿಕೆಟ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿರುವಂತೆಯೇ ಇತ್ತ ನಾಯಕ ವಿರಾಟ್ ಕೊಹ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ಕೊಹ್ಲಿ ಕುತ್ತಿಗೆ ನೋವಿನಿಂದಾಗಿ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಕೊಹ್ಲಿ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಬೇಕಿತ್ತು.
ಆದರೆ ಇದೀಗ ಕುತ್ತಿಗೆ ನೋವಿನ ಸಮಸ್ಯೆ ಎದುರಾಗಿರುವುದರಿಂದ ಅವರು ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಜೈಪುರದಲ್ಲಿ ನಡೆದ ತನ್ನ ಕೊನೆಯ ಐಪಿಎಲ್ ಪಂದ್ಯದ ವೇಳೆ ಕೊಹ್ಲಿ ಕುತ್ತಿಗೆ ನೋವಿಗೆ ತುತ್ತಾಗಿದ್ದರು. ಬಳಿಕ ತಂಡ ಫಿಸಿಯೋ ಚಿಕಿತ್ಸೆ ನೀಡಿದ್ದರಾದರೂ, ಮುಂಜಾಗ್ರತಾ ಕ್ರಮವಾಗಿ ಕೊಹ್ಲಿ ಮುಂಬೈ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನು ಈ ಹಿಂದೆ ಕೊಹ್ಲಿ ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯನ್ನು ಅಲ್ಲಗಳೆದಿರುವ ಬಿಸಿಸಿಐ ಅಧಿಕಾರಿಯೊಬ್ಬರು ಅವರಿಗೆ ಸ್ಲಿಪ್ ಡಿಸ್ಕ್ ಆಗಿಲ್ಲ. ಕುತ್ತಿಗೆ ಭಾಗದ ನೋವಿನಿಂದ ಬಳಲುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂತೆಯೇ ಕೊಹ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಇಂಗ್ಲೆಂಡ್ ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ಜಾರೆ ಎಂದು ಸ್ಪಷ್ಟನೆ ನೀಡಿದರು.
ನಿನ್ನೆಯಷ್ಟೇ ಕ್ರಿಕೆಟಿಗ ಕೊಹ್ಲಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಫಿಟ್ನೆಸ್ ಸವಾಲು ಸ್ವೀಕರಿಸಿದ್ದರು. ಅಲ್ಲದೆ ಪ್ರಧಾನಿ ಮೋದಿ, ಪತ್ನಿ ಅನುಷ್ಕಾಗೂ ಫಿಟ್ನೆಸ್ ಸಾವಾಲು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics