ಕ್ರಿಕೆಟ್

ಅಪಮಾನ ಮೆಟ್ಟಿನಿಂತು ಚೆನ್ನೈ 'ಕಿಂಗ್' ಆದ ಕೂಲ್ ಕ್ಯಾಪ್ಟನ್!

Srinivasamurthy VN
ಮುಂಬೈ: ಅಪಮಾನಗಳೇ ಗೆಲುವಿನ ಮೆಟ್ಟಿಲಾಗಬಲ್ಲವು ಎಂಬುದನ್ನು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಮತ್ತೆ ಸಾಬೀತು ಪಡಿಸಿದ್ದು, 2017ರಲ್ಲಿ ಆದ ಅವಮಾನವನ್ನು 2018ರಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಮೆಟ್ಟಿ ನಿಂತಿದ್ದಾರೆ.
ಹೌದು.. ಚೆನ್ನೈ ತಂಡ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ನಿಷೇಧಕ್ಕೆ ಒಳಗಾಗಿದ್ದಾಗ ಧೋನಿ ಪುಣೆ ತಂಡದ ಸಾರಥ್ಯವಹಿಸಿದ್ದರು. ಅವರ ಅದೃಷ್ಟ ಕೈಕೊಟ್ಟಿತ್ತೋ ಅಥವಾ ತಂಡದ ಪ್ರದರ್ಶನವೇ ಉತ್ತಮವಾಗಿರಲಿಲ್ಲವೋ ಗೊತ್ತಿಲ್ಲ. ಆದರೆ ಧೋನಿ ನೇತೃತ್ವದ ಪುಣೆ ತಂಡ ಮಾತ್ರ ನೀರಸ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬಿತ್ತು. ಆದರೆ ಇದಕ್ಕೂ ಮೊದಲು ಟೀಂ ಇಂಡಿಯಾದ ಅತ್ಯಂತ ಯಶಸ್ವೀ ನಾಯಕ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದ್ದ ಧೋನಿಯನ್ನು ನಾಯಕತ್ವದಿಂದ ವಜಾ ಮಾಡಿತ್ತು.
ಈ ವಿಚಾರ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪುಣೆ ತಂಡದ ಮಾಲೀಕರ ವಿರುದ್ಧ ಸಮರವನ್ನೇ ಸಾರಿದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪುಣೆ ತಂಡದ ಮಾಲೀಕರ ಕಾಲೆಳೆಯುತ್ತಿದ್ದರು. ಧೋನಿ ಕೂಡ ಈ ಬೆಳವಣಿಗೆಗಳಿಂದ ಕೊಂಚ ಕುಂದಿದಂತೆ ಕಂಡು ಬಂದರು. ಆದರೆ 2018ರ ಐಪಿಎಲ್ ಟೂರ್ನಿ ಘೋಷಣೆಯಾಗಿದ್ದೇ ತಡ ಕ್ಯಾಪ್ಟನ್ ಕೂಲ್ ಫೀನಿಕ್ಸ್ ನಂತೆ ಎದ್ದು ಬಂದು ಮತ್ತೆ ತಮ್ಮದೇ ಫೇವರಿಟ್ ತಂಡ ಸಾರಥ್ಯ ವಹಿಸಿಕೊಂಡರು. 
ನಿಜಕ್ಕೂ ಧೋನಿ ಹವಾ ಎಷ್ಟರ ಮಟ್ಟಿಗೆ ಇತ್ತು ಎಂದರೆ ಧೋನಿ ಅವರನ್ನು ಚಿತ್ರರಂಗದ ಸೂಪರ್ ಸ್ಟಾರ್ ರಜನಿ ಕಾಂತ್ ಅವರಿಗೆ ಹೋಲಿಕೆ ಮಾಡಲಾಗುತ್ತಿತ್ತು. ಚೆನ್ನೈ ತಂಡದ ಪರ ಜಾಹಿರಾತುಗಳಲ್ಲೂ ಧೋನಿ ಅವರನ್ನು ಅಭಿಮಾನಿಗಳು ತಲೈವಾ, ತಲಾ ಎಂದೇ ಕರೆಯುತ್ತಿದ್ದರು. ಚಿತ್ರರಂಗದಲ್ಲಿ ರಜನಿ ಸೂಪರ್ ಸ್ಟಾರ್ ಆದರೆ ಕ್ರಿಕೆಟ್ ನಲ್ಲಿ ಧೋನಿ ಸೂಪರ್ ಸ್ಟಾರ್ ಎಂದು ಅಭಿಮಾನಿಗಳು ಬಿಂಬಿಸುತ್ತಿದ್ದರು. ಇದೀಗ ಅಭಿಮಾನಿಗಳ ಈ ನಿರೀಕ್ಷೆಯನ್ನು ಹುಸಿಗೊಳಿಸದ ಧೋನಿ ತಮ್ಮ ಚೆನ್ನೈ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ್ದು, ಮೂರನೇ ಬಾರಿಗೆ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ.
ಆ ಮೂಲಕ ತಾವೇಕೆ ಕ್ರಿಕೆಟ್ ರಂಗ ಶ್ರೇಷ್ಠ ಕ್ಯಾಪ್ಟನ್ ಎಂಬುದನ್ನು ಧೋನಿ ಮತ್ತೆ ಸಾಬೀತು ಮಾಡಿ ತೋರಿಸಿದ್ದಾರೆ.
SCROLL FOR NEXT