ಕ್ರಿಕೆಟ್

ಮಿಥಾಲಿ ರಾಜ್ ಕೇವಲ ವೈಯುಕ್ತಿಕ ದಾಖಲೆಗಾಗಿ ಆಟವಾಡುತ್ತಾರೆ: ಕೋಚ್ ರಮೇಶ್ ಪವಾರ್ ಆರೋಪ

Srinivasamurthy VN
ನವದೆಹಲಿ: ಮಿಥಾಲಿ ರಾಜ್ ತಂಡದಲ್ಲಿ ತಮ್ಮ ಪಾತ್ರವನ್ನರಿಯದೇ ಕೇವಲ ತಮ್ಮ ವೈಯುಕ್ತಿಕ ದಾಖಲೆಗಾಗಿ ಆಡುತ್ತಾರೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪವಾರ್ ಹೇಳಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಫೋಟವಾಗಿರುವ ಭಿನ್ನಾಭಿಪ್ರಾಯ ಇದೀಗ ಬಿಸಿಸಿಐ ಮೆಟ್ಟಿಲೇರಿದ್ದು, ಮಿಥಾಲಿರಾಜ್ ಮತ್ತು ತಮ್ಮ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ತಂಡದ ಕೋಚ್ ರಮೇಶ್ ಪವಾರ್ ಇಂದು ತಮ್ಮ ವಾದ ಮಂಡಿಸಿದ್ದಾರೆ. ಈ ವೇಳೆ ಮಿಥಾಲ್ ರಾಜ್ ವಿರುದ್ಧ ಕೋಚ್ ರಮೇಶ್ ಪವಾರ್ ಹಲವು ಆರೋಪ ಮಾಡಿದ್ದು, ಮಿಥಾಲಿ ರಾಜ್ ತಂಡದಲ್ಲಿನ ತಮ್ಮ ಪಾತ್ರವನ್ನು ನಿರ್ಲಕ್ಷಿಸಿದ್ದಾರೆ. ಕೇವಲ ಅವರು ತಮ್ಮ ವೈಯುಕ್ತಿಕ ದಾಖಲೆಗಾಗಿ ಆಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
'ಮಿಥಾಲಿರಾಜ್ ತಂಡದ ಹಿರಿಯ ಆಟಗಾರ್ತಿ. ಈ ಹಿಂದೆ ತಂಡಕ್ಕೆ ಅವರು ನಾಯಕಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ತಂಡದಲ್ಲಿನ ತಮ್ಮ ಜವಾಬ್ದಾರಿಯನ್ನು ಮರೆತಂದಿದ್ದು, ತಂಡದ ಸಮಾಲೋಚನಾ ಸಭೆಗಳಲ್ಲಿ ಕನಿಷ್ಠ ಮಾಹಿತಿ ಹಂಚಿಕೊಳ್ಳುತ್ತಾರೆ. ಇದು ಕೇವಲ ಅವರು ನಾಮ್ ಕೇ ವಾಸ್ತೆಗಾಗಿ ಮಾತ್ರ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಅವರು ಸಂಪೂರ್ಣವಾಗಿ ತಂಡಕ್ಕಾಗಿ ಸಮರ್ಥಿಸಿಕೊಳ್ಳುತ್ತಿಲ್ಲ. ಅವರು ಕೇವಲ ತಮ್ಮ ವೈಯುಕ್ತಿಕ ದಾಖಲೆಗಾಗಿ ಆಡುತ್ತಿದ್ದಾರೆ. ಇದರಿಂದ ತಂಡದ ಮೇಲೆ ವ್ಯತಿರಿಕ್ತಪರಿಣಾಮ ಬೀರುತ್ತಿದೆ. 
ಇಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ತಂಡದ ಆಟಗಾರ್ತಿಯರು ಮಾತ್ರವಲ್ಲ ನನಗೂ ಕಷ್ಟವಾಗುತ್ತಿದೆ. ತಂಡದ ಅಭ್ಯಾಸ ಪಂದ್ಯಗಳಲ್ಲಿ ಅವರು ಕನಿಷ್ಠ ಮೊತ್ತ ಪೇರಿಸುತ್ತಿದ್ದಾರೆ. ರನ್ ಗಳಿಕೆಗಾಗಿ ತೀವ್ರ ಪರದಾಡುತ್ತಾರೆ.  ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿಸಲು ತಂಡದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಇದಕ್ಕೆ ವಿರೋಧಿಸಿದ್ದ ಮಿಥಾಲಿ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ನಾಳೆ ಸುದ್ದಿಗೋಷ್ಠಿ ಕರೆದು ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಹೇಳಿದರು. ಅವರ ನಡವಳಿಕೆಯಿಂದ ನಿಜಕ್ಕೂ ನಾವು ಆಘಾತಕ್ಕೊಳಗಾಗಿದ್ದೆವು.
ನಿವೃತ್ತಿ ವಿಚಾರವನ್ನು ಅವರು ನಮ್ಮನ್ನು ಬೆದರಿಸಲು ಅವರು ಬಳಕೆ ಮಾಡುತ್ತಿರುವಂತಿದೆ. ಅವರ ನಡವಳಿಕೆಯಿಂದ ನನಗೆ ತಿಳಿದುಬಂದಿದ್ದೇನು ಎಂದರೆ, ತಂಡಕ್ಕಿಂತ ಅವರೇ ಮೊದಲು. ಅವರ ಬಳಿಕವೇ ತಂಡ ಮತ್ತು ಆಟ. ಇದು ನನಗನ್ನಿಸಿದ್ದು. ಆದರೆ ತಂಡದ ಸಕಾರಾತ್ಮಕ ವಾತಾವರಣ ನಿರ್ಮಾಣ ಮಾಡಲು ಇದು ತೊಡಕಾಗಿದೆ. ಪಂದ್ಯ ಮುಕ್ತಾಯದ ಬಳಿಕವೂ ಮಿಥಾಲಿ ತಂಡದೊಂದಿಗೆ ಇರುವುದಿಲ್ಲ. ತಮ್ಮದೇ ತಂಡ ಮಾಡಿಕೊಂಡು ಮತಾನಾಡುತ್ತಿರುತ್ತಾರೆ. ಇದು ಪರೋಕ್ಷವಾಗಿ ತಂಡದಲ್ಲಿ ಗುಂಪುಗಾರಿಕೆಗೆ ಕಾರಣವಾಗಿದೆ ಎಂದು ಕೋಚ್ ರಮೇಶ್ ಪವಾರ್ ಗಂಭೀರ ಆರೋಪ ಮಾಡಿದ್ದಾರೆ.
SCROLL FOR NEXT