ಸೌರಾಷ್ಟ್ರ : ರಾಜ್ ಕೋಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಶಿಸ್ತುಬದ್ಧ ಆಲ್ ರೌಂಡ್ ಆಟ ಪ್ರದರ್ಶಿಸಿದ್ದು, 9 ವಿಕೆಟ್ ನಷ್ಟಕ್ಕೆ 649 ರನ್ ಡಿಕ್ಲೇರ್ ಮಾಡಿಕೊಂಡರೆ, ವೆಸ್ಟ್ ಇಂಡೀಸ್ ಆರು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ್ದು, 555 ರನ್ ಗಳಿಂದ ಹಿನ್ನೆಡೆ ಅನುಭವಿಸಿದೆ.
ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಕೆರಿಬಿಯನ್ನರು 50 ರನ್ ಆಗುವ ಮುನ್ನವೇ 5 ವಿಕೆಟ್ ಕಳೆದುಕೊಂಡಿತು. ನಾಲ್ಕು ಒವರ್ ಗಳಲ್ಲಿ ಕೇವಲ ಐದು ರನ್ ನೀಡಿದ ವೇಗಿ ಮೊಹಮ್ಮದ್ ಶಮಿ ವೆಸ್ಟ್ ಇಂಡೀಸ್ ನಾಯಕ ಕ್ರೈಗ್ ಬ್ರಾಥ್ ವೈಟ್ (2) ಮತ್ತು ಕೈರಾನ್ ಪೊವೆಲ್ ಅವರನ್ನು ಕೇವಲ 1 ರನ್ ನೀಡಿ ಫೆವಿಲಿಯನ್ ಗೆ ಅಟ್ಟಿದರು.
ಅಶ್ವಿನ್ ಬೌಲಿಂಗ್ ನಲ್ಲಿ ಶೈ ಹೋಪ್ ಔಟಾದರೆ, ಸಿಮ್ರಾನ್ ಹೆಟ್ ಮೈಯರ್ ಅವರನ್ನು ರವೀಂದ್ರ ಜಡೇಜಾ ರನ್ ಔಟ್ ಮಾಡಿದರು. ಇನ್ನೂ ರವೀಂದ್ರ ಜಡೇಜಾ ಅವರ ಬೌಲಿಂಗ್ ನಲ್ಲಿ ರಹಾನೆ ಅವರಿಗೆ ಸುನಿಲ್ ಅಂಬ್ರೀಸ್ ಕ್ಯಾಚ್ ನೀಡಿದರು. ರೊಸ್ಟನ್ ಚೇಸ್ ಹಾಗೂ ಕೀಮೊ ಪೌಲ್ ಕ್ರೀಸಿನಲ್ಲಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 24ನೇ ಶತಕ ಸಿಡಿಸಿದರೆ, ರಿಷಭ್ ಪಂತ್ 92 ರನ್ಗೆ ಔಟಾಗುವ ಮೂಲಕ ಶತಕ ವಂಚಿತರಾದರು. ಇನ್ನು ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ ತವರಿನ ಅಂಗಳದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು.
ಜಡೇಜಾ ಸೆಂಚುರಿ ಆಗುತ್ತಿದ್ದಂತೆ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು. ವಿಂಡೀಸ್ ಪರ ದೇವೇಂದ್ರ ಬಿಶು 4 ವಿಕೆಟ್ ಕಿತ್ತು ಮಿಂಚಿದರೆ, ಲೆವಿಸ್ 2 ವಿಕೆಟ್ ಪಡೆದರು.