ಓವಲ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದ್ದು, ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದೆ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಒಡ್ಡಿದ 332 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಭಾರತ, 51 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 174 ರನ್ ಗಳಿಸುವ ಮೂಲಕ 158 ರನ್ ಗಳ ಭಾರಿ ಹಿನ್ನಡೆ ಅನುಭವಿಸಿದೆ.
ಭಾರತಕ್ಕೆ ಆರಂಭದಲ್ಲೇ ಶಿಖರ್ ಧವನ್(3), ವಿಕೆಟ್ ನಷ್ಟ, ಬಳಿಕ ರಾಹುಲ್-ಪೂಜಾರ ಉತ್ತಮ ಜೊತೆಯಾಟದ ನಿರೀಕ್ಷೆಯನ್ನು ಹುಸಿಗೊಳಿಸಿದರು. ಕೆ.ಎಲ್ ರಾಹುಲ್ 37ರನ್ಗಳಿಸಿದ್ದಾಗ ಸ್ಯಾಮ್ ಕರನ್ಗೆ ವಿಕೆಟ್ ಒಪ್ಪಿಸಿದರೆ, ಉತ್ತಮವಾಗೇ ಆಡುತ್ತಿದ್ದ ಪೂಜಾರ(37) ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೆ ಅಜಿಂಕ್ಯ ರಹಾನೆ ಸೊನ್ನೆ ಸುತ್ತಿದ್ದು ಭಾರತಕ್ಕೆ ಮತ್ತಷ್ಟು ಹೊಡೆತ ನೀಡಿತು. ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಹನುಮ ವಿಹಾರಿ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಲು ಮುಂದಾದರು. ಆದರೆ ಕೊಹ್ಲಿ 49 ರನ್ಗೆ ಔಟ್ ಆಗುವ ಮೂಲಕ ತಂಡಕ್ಕೆ ಆಘಾತ ನೀಡಿದರೆ, ಕೊಹ್ಲಿ ಬೆನ್ನಲ್ಲೆ ರಿಷಭ್ ಪಂತ್ 5 ರನ್ಗೆ ಪೆವಿಲಿಯನ್ ಹಾದಿ ಹಿಡಿದರು.
ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಹನುಮ ವಿಹಾರಿ 25 ಹಾಗೂ ರವೀಂದ್ರ ಜಡೇಜಾ 8 ರನ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಕಿತ್ತರೆ, ಸ್ಟುವರ್ಟ್ ಬ್ರಾಡ್ ಹಾಗೂ ಸ್ಯಾಮ್ ಕುರ್ರನ್ 1 ವಿಕೆಟ್ ಪಡೆದರು.
ಭಾರತ ಪರ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತು ಮಿಂಚಿದರೆ, ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದರು.