ಇಸ್ಲಾಮಾಬಾದ್: ಐಸಿಸಿ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳ ಬಾಕಿ ಉಳಿದಿರುವಂತೆಯೇ ಪಾಕಿಸ್ತಾನ ಕ್ರಿಕೆಟಿಗರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಸೀಂ ಅಕ್ರಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಯೆಟ್ ಎಂಬುದು ಪ್ರತಿಯೊಬ್ಬ ಕ್ರೀಡಾಪಟುವಿಗೂ ಪ್ರಮುಖವಾದ ಅಂಶವಾಗಿದೆ. ಪ್ರಮುಖ ಟೂರ್ನಮೆಂಟ್ ಗೂ ಮುನ್ನ ಪಡೆಯುವ ತರಬೇತಿಯಲ್ಲಿ ಡಯಟ್ ಕೂಡ ಒಂದು ಭಾಗವಾಗಿರುತ್ತದೆ. ಅದರಲ್ಲೂ ಕ್ರಿಕೆಟ್ ನಲ್ಲೂ ಕೂಡ ಇದರ ಅವಶ್ಯಕತೆ ಇದ್ದು, ಇದನ್ನು ಕಡೆಗಣಿಸಿರುವ ಪಾಕಿಸ್ತಾನ ತಂಡದ ವಿರುದ್ಧ ಮಾಜಿ ಆಟಗಾರ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಸಿಸಿ ವಿಶ್ವಕಪ್ ಗಾಗಿ ವಿಶ್ವದ ಎಲ್ಲ ತಂಡಗಳೂ ಭರ್ಜರಿ ಕಸರತ್ತು ನಡೆಸಿದ್ದು, ಐಪಿಎಲ್, ರಣಜಿ ನಂತಹ ದೇಶೀಯ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಆಯಾ ದೇಶಗಳ ಕ್ರಿಕೆಟ್ ಸಂಸ್ಥೆಗಳು ಆಟಗಾರರ ಸಾಮರ್ಥ್ಯ ಪರೀಕ್ಷೆ ಮಾಡುತ್ತಿದೆ. ಅಂತೆಯೇ ಆಟಗಾರರೂ ಕೂಡ ಕಠಿಣ ಡಯಟ್ ಮತ್ತು ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ. ಆದರೆ ಪಾಕಿಸ್ತಾನದ ಆಟಗಾರರು ಮಾತ್ರ ಇದಕ್ಕೆ ತದ್ವಿರುದ್ಧ ಎಂಬಂತೆ ಬಿರಿಯಾನಿ ದಾಸರಾಗಿದ್ದಾರೆ ಎಂದು ವಸೀಂ ಅಕ್ರಂ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಕ್ರಿಕೆಟಿಗರು ಜಂಕ್ ಫುಡ್ ಮೊರೆ ಹೋಗುತ್ತಿರುವುದನ್ನು ಅಕ್ರಂ ಕಡ್ಡಿ ಮುರಿದಂತೆ ಖಂಡಿಸಿದ್ದಾರೆ. ಪಾಕ್ ಕ್ರಿಕೆಟಿಗರು ಬಿರಿಯಾನಿ ಸೇರಿದಂತೆ ಕೊಬ್ಬಿನಾಂಶ ಹೆಚ್ಚಿರುವ ಆಹಾರ ಸೇವಿಸುವುದನ್ನು ಅಕ್ರಂ ವಿರೋಧಿಸಿದ್ದು, ಇನ್ನೂ ಕೂಡ ನಮ್ಮ ಆಟಗಾರರಿಗೆ ಬಿರಿಯಾನಿಯನ್ನು ಉಣಬಡಿಸಲಾಗುತ್ತಿದೆ. ಎಲ್ಲಿಯವರೆಗೆ ಬಿರಿಯಾನಿ ಸೇವಿಸುತ್ತಾರೋ ಅಲ್ಲಿಯವರೆಗೂ ಅವರು ಉದ್ಧಾರವಾಗಲ್ಲ. ಬಿರಿಯಾನಿ ಸೇವಿಸಿ ಚಾಂಪಿಯನ್ಸ್ ವಿರುದ್ಧ ಸೆಣಸಾಡಲಾರರು ಎಂದು ಟೀಕಿಸಿದ್ದಾರೆ.
'1992 ರಿಂದ ಇಲ್ಲಿಯವರೆಗೂ ನಮ್ಮ ತಂಡ 50 ಓವರ್ ನ ವಿಶ್ವಕಪ್ ಟೂರ್ನಿಯನ್ನು ಜಯಿಸಿಲ್ಲ. ವಿಶ್ವಕಪ್ ನಲ್ಲಿ ಕಳಪೆ ತಂಡ ಎಂಬ ಕುಖ್ಯಾತಿಗೆ ನಮ್ಮ ತಂಡ ಪದೇ ಪದೇ ಒಳಗಾಗುತ್ತಿದೆ. ಅಭಿಮಾನಿಗಳು ಹಳೆಯ ದಿನಗಳನ್ನು ಮೆಲಕು ಹಾಕಿ ಗೇಲಿ ಮಾಡುತ್ತಿದ್ದಾರೆ. ಈ ಹಿಂದೆ ಅಖ್ತರ್, ವಾಕರ್ ಯೂನಿಸ್ ಹಾಗೂ ಇಮ್ರಾನ್ ಖಾನ್ ರಂತಹ ಆಟಗಾರರು ತಮ್ಮ ಎದುರಾಳಿಗಳಿಗೆ ತಕ್ಕ ಪೈಪೋಟಿಯನ್ನು ನೀಡುತ್ತಿದ್ದರು. ಆದರೆ, ಈಗ ಅದು ಕಾಣುತ್ತಿಲ್ಲ.
ಪಾಕಿಸ್ತಾನ ವಿಶ್ವಕಪ್ ಅನ್ನು ಗೆಲ್ಲಲಿದೆ ಎಂದು ವಿಶ್ವದ ಯಾರೊಬ್ಬರು ಕೂಡ ನಮ್ಮ ತಂಡವನ್ನು ನಂಬಿ ಹಣವನ್ನು ಕಟ್ಟುವುದಿಲ್ಲ. ಮೇ 30 ರಿಂದ ಇಂಗ್ಲೆಂಡ್ ನಲ್ಲಿ ಆರಂಭವಾಗುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸರ್ಫರಾಜ್ ಅಹಮ್ಮದ್ ಮುನ್ನಡೆಸಲಿದ್ದಾರೆ. ಆದರೆ, ಸರ್ಫರಾಜ್ ಹಾಗೂ ತಂಡದ ಸಹ ಆಟಗಾರರ ದೈಹಿಕ ಸಾಮರ್ಥ್ಯವೇ ಒಂದು ಪ್ರಶ್ನೆಯಾಗಿದೆ ಎಂದು ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕ್ ಈಗಾಗಲೇ ವಿಶ್ವಕಪ್ ಟೂರ್ನಿಗೆ 23 ಮಂದಿ ಸದಸ್ಯರನ್ನು ಆಯ್ಕೆ ಮಾಡಿದ್ದು, ಏಪ್ರಿಲ್ 18 ರಂದು 15 ಸದಸ್ಯರನ್ನು ಫೈನಲ್ ಮಾಡಲಿದೆ. ಅದು ವಿಶ್ವಕಪ್ ಆಗಲಿ ಅಥವಾ ಬೇರೆ ಪಂದ್ಯಗಳೇ ಆಗಲಿ ಉತ್ತಮ ತರಬೇತಿ ಹಾಗೂ ಅವರು ಏನನ್ನು ತಿನ್ನುತ್ತಾರೋ ಎಂಬುದರ ಬಗ್ಗೆ ಅರಿವಿರಬೇಕು ಎಂದು ಅಕ್ರಂ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos