ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲೂ ಕಿವೀಸ್ ವೇಗಿಗಳು ಪಾರಮ್ಯ ಮೆರೆದಿದ್ದು, ಭಾರತದ ಅಗ್ರ ಬ್ಯಾಟ್ಸಮನ್ ಗಳನ್ನು ಅತಿ ಬೇಗನೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ವೆಲ್ಲಿಂಗ್ಟನ್ ನ ವೆಸ್ಟ್ ಪ್ಯಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡಕ್ಕೆ ನ್ಯೂಜಿಲೆಂಡ್ ಬೌಲರ್ ಗಳಾದ ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್ ಮರ್ಮಾಘಾತ ನೀಡಿದ್ದಾರೆ. ಇಬ್ಬರೂ ಬೌಲರ್ ಗಳು ತಲಾ 2 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಪಡೆಗೆ ಆರಂಭಿಕ ಮಹತ್ವದ ಯಶಸ್ಸು ತಂದುಕೊಟ್ಟಿದ್ದು, ಭಾರತ ತಂಡ ಕೇವಲ 22 ರನ್ ಗಳಿಗೆ ತನ್ನ ಆರಂಭಿಕ 4 ವಿಕೆಟ್ ಗಳನ್ನು ಕಳೆದುಕೊಂಡಿದೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿ ಮ್ಯಾಟ್ ಹೆನ್ರಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಇವರ ಬೆನ್ನಲ್ಲೇ 6 ರನ್ ಗಳಿಸಿದ ಶಿಖರ್ ಧವನ್ ಕೂಡ ಬೌಲ್ಟ್ ಬೌಲಿಂಗ್ ನಲ್ಲಿ ಹೆನ್ರಿ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಬಂದ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ತಮ್ಮ 2ನೇ ಏಕದಿನ ಪಂದ್ಯದಲ್ಲೂ ವಿಫಲರಾದರು. ಹೆನ್ರಿ ಬೌಲಿಂಗ್ ನಲ್ಲಿ 7 ರನ್ ಗಳಿಸಿದ್ದ ಗಿಲ್ ಸ್ಯಾಂಥನರ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಮಧ್ಯಮ ಕ್ರಮಾಂಕದ ಆಪದ್ಭಾಂಧವ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ ಕೂಡ ಕೇವಲ 1 ರನ್ ಗಳಿಸಿ ಬೌಲ್ಟ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು.
ಇನ್ನು ಪ್ರಸ್ತುತ ಅಂಬಾಟಿ ರಾಯುಡು (1 ರನ್) ಹಾಗೂ ವಿಜಯ್ ಶಂಕರ್ (1 ರನ್) ಕ್ರೀಸ್ ನಲ್ಲಿದ್ದು, ಭಾರತ ತೀವ್ರ ಸಂಕಷ್ಟದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics