ವೆಲ್ಲಿಂಗ್ಟನ್: ಭಾರತದ ಮಾಸ್ಟರ್ ಮೈಂಡ್ ವಿಕೆಟ್ ಕೀಪರ್ ಎಂಎಸ್ ಧೋನಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬ್ಯಾಟ್ಸಮನ್ ಗಳಿಗೆ ಸಲಹೆ ನೀಡಿದೆ.
ಉತ್ತಮ ಗೇಮ್ ಫಿನಿಶರ್ ಎಂದು ಕರೆಸಿಕೊಂಡಿರುವ ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರು ವಿಕೆಟ್ ಹಿಂದೆಯೂ ಚಾಣಾಕ್ಷ ಆಟಗಾರ. ಇದು ಸಾಕಷ್ಟು ಪಂದ್ಯಗಳಲ್ಲಿ ಸಾಬೀತಾಗಿದ್ದು, ಇತ್ತೀಚೆಗೆ ಕೊನೆಗೊಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಧೋನಿ ತಮ್ಮ ಕೈಚಳಕದಿಂದ ಹಲವು ಬ್ಯಾಟ್ಸಮನ್ ಗಳ ಬಲಿ ಪಡೆದಿದ್ದರು. ಈ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಿವೀಸ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಿಗೆ ಲಭ್ಯರಾಗಿದ್ದ ಧೋನಿ ಅವರು ನಾಲ್ಕನೇ ಪಂದ್ಯಕ್ಕೆ ಗಾಯದ ಕಾರಣದಿಂದಾಗಿ ಅಲಭ್ಯರಾಗಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿತ್ತು. ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ ಧೋನಿ ಅವರು ಬ್ಯಾಟಿಂಗ್ ನಲ್ಲಿ ವಿಫಲವಾದರೂ ಕೂಡ ಕೀಪಿಂಗ್ನಲ್ಲಿ ಯಶಸ್ವಿಯಾಗಿದ್ದರು.
ವೆಲ್ಲಿಂಗ್ಟನ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 252 ರನ್ ಗುರಿ ಬೆನ್ನತ್ತಿದ್ದ ಕಿವೀಸ್ ತಂಡಕ್ಕೆ ಧೋನಿ ಆಘಾತ ನೀಡಿದರು. 44 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಜಿಮ್ಮಿ ನಿಶಮ್ ಅವರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು.
ಧೋನಿ ಅವರ ಸ್ಟಂಪ್ ವೇಗಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಧೋನಿ ಅವರು ವಿಕೆಟ್ ಹಿಂದೆ ಇರುವಾಗ ಯಾರು ಕ್ರೀಸ್ ಬಿಟ್ಟು ಮುಂದೆ ಹೋಗಿ ಹೊಡೆಯುವ ಧೈರ್ಯ ಮಾಡಬೇಡಿ ಎಂದು ಎಲ್ಲ ಬ್ಯಾಟ್ಸಮನ್ಗಳಿಗೆ ಎಚ್ಚರಿಕೆ ನೀಡುವ ಮೂಲಕ ಧೋನಿ ವಿಕೆಟ್ ಕೀಪಿಂಗ್ ಅನ್ನು ಶ್ಲಾಘಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics