ಕ್ರಿಕೆಟ್

ಶ್ರೀಲಂಕಾ ವಿರುದ್ಧ ರಾಸ್ ಟೇಲರ್ ಆರ್ಭಟ; ಸಚಿನ್, ಕೊಹ್ಲಿ ದಾಖಲೆ ಧೂಳಿಪಟ

Srinivasamurthy VN
ಸ್ಯಾಕ್ಸ್ ಟನ್ ಓವಲ್: ಪ್ರವಾಸಿ ಶ್ರೀಲಂಕಾ ತಂಡದ ವಿರುದ್ದ ನಡೆದ 3ನೇ ಏಕದಿನ ಪಂದ್ಯದಲ್ಲಿ ಕಿವೀಸ್ ದೈತ್ಯ ಆಟಗಾರ ರಾಸ್ ಸಿಂಹಳೀಯರಿಗೆ ತಮ್ಮ ವಿಶ್ವರೂಪ ತೋರಿಸಿದ್ದು, ಭರ್ಜರಿ ಶತಕದ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ನ್ಯೂಜಿಲೆಂಡ್​ ತಂಡದ ಸ್ಫೋಟಕ ಬ್ಯಾಟ್ಸಮನ್ ರಾಸ್​ ಟೇಲರ್ ಹೊಸ ದಾಖಲೆ ಬರೆದಿದ್ದು, ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ತವರಿನ ಓವಲ್​​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲಿ ನಿಧಾನವಾಗಿ ಆಡಿದ್ದ ಟೇಲರ್​ ಬಳಿಕ ಭರ್ಜರಿ ಹೊಡೆತಗಳಿಗೆ ಮುಂದಾದರು.  ಟೇಲರ್ ಅವರ 131 ಎಸೆತಗಳಲ್ಲಿ 137 ರನ್​ ನೆರವಿನಿಂದ ನ್ಯೂಜಿಲೆಂಡ್ ತಂಡ ಶ್ರೀಲಂಕಾಗೆ 364 ರನ್ ಗಳ ಬೃಹತ್​ ಗುರಿ ನೀಡಿತ್ತು. ಆದರೆ ಲಂಕಾ ತಂಡ 41.5 ಓವರ್​ನಲ್ಲಿ 249 ರನ್​ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.  
ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೇಲರ್​ ಸತತ  6 ಪಂದ್ಯಗಳಿಂದ  50 ಕ್ಕೂ ಹೆಚ್ಚು ರನ್​ ಬಾರಿಸಿದ ಹಿರಿಮೆಗೆ ಪಾತ್ರರಾಗಿದರು. ಕಳೆದ ಆರು ಇನ್ನಿಂಗ್ಸ್ ಗಳಲ್ಲಿ ಕಿವೀಸ್ ನ ಆಟಗಾರ ಕ್ರಮವಾಗಿ 181, 80, 86, 54, 90 ಮತ್ತು 137 ರನ್ ಗಳಿಸಿ ಅಪರೂಪ ಸಾಧನೆ ಮಾಡಿದ್ದಾರೆ. ಈ ಹಿಂದೆ ಇಂತಹದೊಂದು ದಾಖಲೆಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್​ ಸೃಷ್ಟಿಸಿದ್ದರು. ಅವರು  5 ಪಂದ್ಯಗಳಿಂದ ಸತತ  50ಕ್ಕೂ ಹೆಚ್ಚು ರನ್ ಸಿಡಿಸಿ ಮಿಂಚಿದ್ದರು. ಈ ದಾಖಲೆಯನ್ನು ರನ್​ ಮಿಷಿನ್ ವಿರಾಟ್ ಕೊಹ್ಲಿ ಸರಿಗಟ್ಟಿದ್ದರು. ಕೊಹ್ಲಿ ಸಹ ಸತತ  5 ಪಂದ್ಯಗಳಲ್ಲಿ 50 ಕ್ಕೂ ಹೆಚ್ಚು ರನ್​ ಪೇರಿಸಿ ದಾಖಲೆ ನಿರ್ಮಿಸಿದ್ದರು.
34ರ ಹರೆಯದ ರಾಸ್​ ಟೇಲರ್​  6 ಪಂದ್ಯಗಳಿಂದ ಸತತ  ರನ್​ ಮಳೆ ಸುರಿಸುತ್ತಿದ್ದು, ಕಿವೀಸ್​ ದಾಖಲೆಗಳ ಪಟ್ಟಿಯಲ್ಲಿ ಸರ್ವ ಶ್ರೇಷ್ಠ ಆಟಗಾರನೆಂದು ಗುರುತಿಸಿಕೊಂಡಿದ್ದಾರೆ. ಅಲ್ಲದೆ ನ್ಯೂಜಿಲೆಂಡ್​ ಪರವಾಗಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಕೂಡ ಟೇಲರ್​ ಪಾಲಾಗಿದೆ. ಏಕದಿನದಲ್ಲಿ 20 ಶತಕಗಳನ್ನು ಬಾರಿಸಿರುವ ಟೇಲರ್​ ಮುಂದಿರುವುದು ಪಾಕ್​ನ ಜಾವೇದ್ ಮಿಯಾಂದಾದ್​ ದಾಖಲೆ ಮಾತ್ರ. 1987 ರಲ್ಲಿ ಮಿಯಾಂದಾದ್​ ಸತತ  9 ಇನಿಂಗ್ಸ್ ಗಳಲ್ಲಿ ನಿರಂತರ  50 ಕ್ಕೂ ಹೆಚ್ಚು ರನ್​ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ಮುರಿಯಲು ರಾಸ್​ ಟೇಲರ್​ ಮುಂದಿರುವುದು ಮುಂದಿನ ಮೂರು ಪಂದ್ಯಗಳು ಮಾತ್ರ.
SCROLL FOR NEXT