ಏಕದಿನ ಕ್ರಿಕೆಟ್ ಗೆ ಸಿರಾಜ್ ಪದಾರ್ಪಣೆ
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಸರಣಿ ದಾಖಲೆಗಳ ನಿರ್ಮಾಣ ಮಾಡಿದ್ದರೆ, ಅದೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಭಾರತದ ಮಹಮದ್ ಸಿರಾಜ್ ಹೀನಾಯ ದಾಖಲೆಯೊಂದನ್ನು ಬರೆದಿದ್ದಾರೆ.
ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವಾಡಿರುವ ಸಿರಾಜ್ 10 ಓವರ್ ಬೌಲಿಂಗ್ ಮಾಡಿದ್ದರು. ಆದರೆ ಯಾವುದೇ ವಿಕೆಟ್ ಪಡೆಯಲು ಯಶಸ್ವಿಯಾಗಿರಲಿಲ್ಲ. ಅಲ್ಲದೆ ಬರೋಬ್ಬರಿ 76 ರನ್ ಗಳನ್ನುನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಈ ಮೂಲಕ ಪದಾರ್ಪಣೆ ಪಂದ್ಯದಲ್ಲೇ ಅತೀ ಹೆಚ್ಚು ರನ್ ನೀಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಿರಾಜ್ ಸ್ಥಾನ ಪಡೆದಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಅತಿ ಹೆಚ್ಚು ರನ್ ನೀಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕರ್ಸನ್ ಘಾವ್ರಿ ಮೊದಲ ಸ್ಥಾನದಲ್ಲಿದ್ದು, 1975ರಲ್ಲಿ ಘಾವ್ರಿ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 11 ಓವರ್ ಗಳಲ್ಲಿ 83 ರನ್ ನೀಡಿದ್ದರು. ಮಂಗಳವಾರ ಸಿರಾಜ್ 10 ಓವರ್ ಗಳಲ್ಲಿ 76 ರನ್ ಗಳನ್ನು ನೀಡುವ ಮೂಲಕ ಈ ಕುಖ್ಯಾತಿಯ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಪದಾರ್ಪಣೆ ಪಂದ್ಯದಲ್ಲೇ ಅತೀ ಕೆಟ್ಟ ಎಕನಾಮಿ ಹೊಂದಿರುವ ಬೌಲರ್ ಎಂಬ ಅಪಕೀರ್ತೀಗೂ ಕೂಡ ಸಿರಾಜ್ ಪಾತ್ರರಾಗಿದ್ದಾರೆ. ಓವರ್ ಗೆ 7.60 ಸರಾಸರಿಯಲ್ಲಿ ರನ್ ನೀಡಿರುವ ಮೊಹಮ್ಮದ್ ಸಿರಾಜ್ ಏಕದಿನ ಕ್ರಿಕೆಟ್ ಕೆರಿಯರ್ ಅನ್ನು ಕೆಟ್ಟದಾಗಿ ಆರಂಭಿಸಿದ ಭಾರತದ ಪ್ರಥಮ ಬೌಲರ್ ಎನಿಸಿಕೊಂಡಿದ್ದಾರೆ. ಅತಿ ಹೆಚ್ಚು ರನ್ ನೀಡಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಘಾವ್ರಿ 7.54 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟು ಎರಡನೇ ಸ್ಥಾನದಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ
ಇನ್ನು ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿ ದುಬಾರಿಯಾದ ಸಿರಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ.