ಕ್ರಿಕೆಟ್

ವಿಶ್ವಕಪ್: ರೋಹಿತ್ ಭರ್ಜರಿ ಶತಕ, ಬಾಂಗ್ಲಾ ಗೆಲುವಿಗೆ 315 ರನ್ ಟಾರ್ಗೆಟ್ ನೀಡಿದ ಭಾರತ

Lingaraj Badiger
ಬರ್ಮಿಂಗ್ ಹ್ಯಾಮ್: ಆರಂಭಿಕ ಆಟಗಾರ ರೋಹಿತ್ ಶರ್ಮಾ(104 ರನ್) ಅವರ ಭರ್ಜರಿ ಶತಕ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್(77 ರನ್) ಸೊಗಸಾದ ಅರ್ಧಶತಕ ನೆರವಿನಿಂದ ಟೀಮ್ ಇಂಡಿಯಾ, ವಿಶ್ವಕಪ್ ಟೂರ್ನಿಯ 40ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕಿದೆ. 
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಕಳೆದ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಭಾರತದ ಸ್ಟಾರ್ ಆಟಗಾರರು, ಬಾಂಗ್ಲಾ ಬೌಲರ್ ಗಳನ್ನು ಕಾಡಿದರು. ಪವರ್ ಪ್ಲೇ ನ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬಾಂಗ್ಲಾ ಗೆಲುವಿಗೆ 315 ರನ್ ಗಳ ಟಾರ್ಗೆಟ್ ನೀಡಿದೆ.
ಜೀವದಾನದ ಲಾಭ ಪಡೆದ ರೋಹಿತ್
ಇನ್ನಿಂಗ್ಸ್ ಐದನೇ ಓವರ್ ಬೌಲಿಂಗ್ ಮಾಡಿದ ಮುಷ್ತಾಫಿಜುರ್ ರಹಮಾನ್ ಎಸೆದ ನಾಲ್ಕನೇ ಎಸೆತವನ್ನು ಪುಲ್ ಮಾಡಲು ಹೋದರು. ಮಿಡ್ ವಿಕೆಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ತಮೀಮ್ ಇಕ್ಬಾಲ್ ಕ್ಯಾಚ್ ಕೈ ಚೆಲ್ಲಿದರು. ಮುಷ್ತಾಫಿಜುರ್ ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಟ್ಟರು. 
ಮೊದಲ ಐದು ಓವರ್ ತಾಳ್ಮೆಯಿಂದ ಬ್ಯಾಟ್ ಮಾಡಿದ ಜೋಡಿ 21 ರನ್ ಕಲೆ ಹಾಕಿತು. ನಂತರದ ಐದು ಓವರ್ ಗಳಲ್ಲಿ ಮೈ ಚಳಿ ಬಿಟ್ಟು ಬ್ಯಾಟ್ ಮಾಡಿ ತಂಡಕ್ಕೆ ನೆರವಾಯಿತು. 10 ಓವರ್ ಗಳಲ್ಲಿ ಟೀಮ್ ಇಂಡಿಯಾ 69 ರನ್ ಸೇರಿಸಿತು. ಇಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ ಬಿಟ್ಟು ಕೊಡಲೇ ಇಲ್ಲ. 
20 ಓವರ್ ವರೆಗೆ ಬ್ಯಾಟಿಂಗ್ ಮಾಡಿದ ಆರಂಭಿಕರು ರನ್ ರೇಟ್ ಕಾಯ್ದುಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದರು. ಈ ಅವಧಿಯಲ್ಲಿ ಟೀಮ್ ಇಂಡಿಯ 122 ರನ್ ಕಲೆ ಹಾಕಿತ್ತು. 
29.2 ಓವರ್ ಗಳ ವರೆಗೂ ಭರ್ಜರಿ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ 180 ರನ್ ಕಲೆ ಹಾಕಿ ಉತ್ತಮ ಸ್ಥಿತಿಯಲ್ಲಿತ್ತು. ಆಗ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕು ಶತಕ ದಾಖಲಿಸಿದ ರೋಹಿತ್ ಶರ್ಮಾ 92 ಎಸೆಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಿಡಿಸುವ ಮೂಲಕ 104 ರನ್ ಗಳಿಸಿ ಔಟಾದರು.
ಸೊಗಸಾದ ಬ್ಯಾಟಿಂಗ್ ನಡೆಸುತ್ತಿದ್ದ ರಾಹುಲ್, ಮೂರಂಕಿ ಮುಟ್ಟುವ ಕನಸು ಕಂಡರು. ಆದರೆ, ಇವರ ಕನಸಿಗೆ ರುಬೇಲ್ ಹುಸೇನ್ ಬ್ರೇಕ್ ಹಾಕಿದರು. ರಾಹುಲ್ ಆಟ 77 ರನ್ ಗಳಿಗೆ ಕೊನೆ ಆಯಿತು. 
ಸತತ ಐದು ಅರ್ಧಶತಕ ಬಾರಿಸಿರುವ ವಿರಾಟ್ ಕೊಹ್ಲಿ 26, ಯುವ ಆಟಗಾರ ರಿಷಭ್ ಪಂತ್ 48 ರನ್ ಬಾರಿಸಿದರು. ಅನುಭವಿ ಮಹೇಂದ್ರ ಸಿಂಗ್ ಧೋನಿ 35 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. 
ಉಳಿದಂತೆ ಬೇರೆ ಆಟಗಾರರು ರನ್ ವೇಗಕ್ಕೆ ಚುರುಕು ಮುಟ್ಟಿಸಲಿಲ್ಲ. ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಗೆ 314 ರನ್ ಕಲೆ ಹಾಕಿದೆ.
ಬಾಂಗ್ಲಾ ಪರ ಮುಷ್ತಾಫಿಜುರ್ ರಹಮಾನ್ 4 ವಿಕೆಟ್ ಪಡೆದರು. 
ಸಂಕ್ಷಿಪ್ತ ಸ್ಕೋರ್
ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 314 ರನ್
ರೋಹಿತ್ ಶರ್ಮಾ 104, ಕೆ.ಎಲ್ ರಾಹುಲ್ 77, ರಿಷಭ್ ಪಂತ್ 48, ಮುಷ್ತಾಫಿಜುರ್ 59ಕ್ಕೆ 4
SCROLL FOR NEXT