ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಸೆಮಿಫೈನಲ್ ಗೆ ಭಾರತ ತಂಡದ ಪ್ರವೇಶ ಖಚಿತ; ಮೆಕ್ಕಲಮ್ ಭವಿಷ್ಯ

Srinivasamurthy VN
ಲಂಡನ್: ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಟೂರ್ನಿ ಇನ್ನೂ ಲೀಗ್ ಹಂತದಲ್ಲಿರುವಂತೆಯೇ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಂ ಅವರ ಭವಿಷ್ಯವಾಣಿಯೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.
ಹೌದು.. ಹಾಲಿ ವಿಶ್ವಕಪ್ ಟೂರ್ನಿಗೆ ಸಂಬಂಧಿಸಿದಂತೆ ಮೆಕ್ಕಲಮ್ ಇಡೀ ಟೂರ್ನಿಯ ಭವಿಷ್ಯ ಬರೆದಿದ್ದು, ಲೀಗ್ ಮತ್ತು ಸೆಮಿಫೈನಲ್ ಹಂತದ ಸಂಪೂರ್ಣ ಪಂದ್ಯಗಳ ಲೆಕ್ಕಾಚಾರಾ ಹಾಕಿ ಯಾವ ತಂಡಗಳು ಸೆಮಿಫೈನಲ್ ಗೆ ತೆರಳುತ್ತವೆ ಎಂದು ಹೇಳಿದ್ದಾರೆ.
ವಿಶ್ವಕಪ್‌ನಲ್ಲಿ ಆಡುತ್ತಿರುವ ಎಲ್ಲ ತಂಡಗಳ ಪ್ರತಿ ಪಂದ್ಯದ ಭವಿಷ್ಯವನ್ನು ಮೆಕ್ಕಲಮ್ ತಮ್ಮ ಡೈರಿಯಲ್ಲಿ ಬರೆದಿದ್ದು, ಯಾರು ಎಷ್ಟು ಪಂದ್ಯಗಳನ್ನು ಗೆಲ್ಲಬಹುದು, ಯಾವ ತಂಡ ಯಾರ ಎದುರು ಸೋಲುತ್ತದೆ, ಯಾರು ಸೆಮಿಫೈನಲ್ ಪ್ರವೇಶಿಸುತ್ತಾರೆ ಎಂದು ಲೆಕ್ಕಾಚಾರ ಹಾಕಿ ಬರೆದಿಟ್ಟಿದ್ದಾರೆ.
ಬ್ರೆಂಡನ್ ಮೆಕ್ಕಲಮ್ ಪ್ರಕಾರ, ಲೀಗ್ ಪಂದ್ಯಗಳಲ್ಲಿ ಭರ್ಜರಿ ಜಯಗಳಿಸಿ ಎದುರಾಳಿಗಳಿಗೆ ಆಘಾತ ನೀಡುವ ಸಾಮರ್ಥ್ಯ ಇರುವ ತಂಡಗಳೆಂದರೆ ಇಂಗ್ಲೆಂಡ್ ಮತ್ತು ಭಾರತ. ಈ ಎರಡೂ ತಂಡಗಳು ತಾವಾಡುವ 9 ಪಂದ್ಯಗಳ ಪೈಕಿ ಎಂಟು ಪಂದ್ಯಗಳಲ್ಲಿ ಗೆಲ್ಲುತ್ತವೆ. ತಲಾ ಒಂದು ಪಂದ್ಯಗಳಲ್ಲಿ ಸೋತು ನಿರಾತಂಕವಾಗಿ ಸೆಮಿಫೈನಲ್ ಪ್ರವೇಶ ಮಾಡುತ್ತವೆ ಎಂದು ಮೆಕಲಂ ಹೇಳಿದ್ದಾರೆ. ಇನ್ನು ಆಸ್ಟ್ರೇಲಿಯಾ ಆರು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸುತ್ತದೆಯಂತೆ. 
ಭಾರತ ಸೋಲುವುದು ಒಂದೇ ಪಂದ್ಯದಲ್ಲಿ
ಮೆಕಲಂ ಅವರ ಅಭಿಪ್ರಾಯದಂತೆ, ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಲಿದೆ. ಹಾಗೆಯೇ ಭಾರತ, ಇಂಗ್ಲೆಂಡ್ ವಿರುದ್ಧ ಮಾತ್ರ ಸೋಲು ಅನುಭವಿಸಲಿದೆ. ಉಳಿದಂತೆ ಎರಡೂ ತಂಡಗಳು ಎಲ್ಲ ಪಂದ್ಯಗಳಲ್ಲಿಯೂ ಎದುರಾಳಿಗಳನ್ನು ಬಗ್ಗುಬಡಿಯಲಿವೆ. ಮಳೆ ಮತ್ತು ಅದೃಷ್ಟ ಕೂಡ ನಾಲ್ಕನೆಯ ಹಂತದ ತಂಡದ ಸ್ಥಾನವನ್ನು ನಿರ್ಧರಿಸುವಲ್ಲಿ ಪಾತ್ರ ವಹಿಸುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ಸ್ವಲ್ಪ ಅದೃಷ್ಟ ಪಡೆದು ಅರ್ಹತೆ ಗಿಟ್ಟಿಸಬಹುದು ಎಂಬ ಆಶಯ ನನಗಿದೆ ಎಂದು ಮೆಕಲಂ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನಾಲ್ಕನೆಯ ಸ್ಥಾನಕ್ಕೆ ನಾಲ್ಕು ತಂಡಗಳ ನಡುವೆ ಪೈಪೋಟಿ
ಲೀಗ್ ಹಂತದ ಪಂದ್ಯಗಳ ಕುರಿತು ಭವಿಷ್ಯ ನುಡಿದಿರುವ ಮೆಕ್ಕಲಮ್, ಸೆಮಿಫೈನಲ್ ಕುರಿತೂ ಹೇಳಿದ್ದಾರೆ. ಸೆಮಿಫೈನಲ್ ಪ್ರವೇಶಿಸುವ ನಾಲ್ಕನೆಯ ತಂಡ ಯಾವುದು ಎಂದು ನಿರ್ದಿಷ್ಟವಾಗಿ ಹೇಳಲು ಅವರಿಗೆ ಸಾಧ್ಯವಾಗಿಲ್ಲ. ನಾಲ್ಕು ತಂಡಗಳ ನಡುವೆ ನಾಲ್ಕನೆಯ ಸ್ಥಾನಕ್ಕೆ ಪೈಪೋಟಿ ಇದೆ ಎನ್ನುವುದು ಅವರ ಅಭಿಪ್ರಾಯ. ಅದರಲ್ಲಿ ಅವರ ತವರಿನ ತಂಡ ನ್ಯೂಜಿಲ್ಯಾಂಡ್ ಕೂಡ ಇದೆ. ವೆಸ್ಟ್ ಇಂಡೀಸ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಭಾರಿ ಪೈಪೋಟಿ ಇರಲಿದೆ ಎಂದಿರುವ ಅವರು, ತಮ್ಮ ದೇಶದ ತಂಡ ಅದೃಷ್ಟದೊಂದಿಗೆ ನಾಲ್ಕರ ಘಟ್ಟ ತಲುಪಲಿ ಎಂದು ಆಶಿಸಿದ್ದಾರೆ.
SCROLL FOR NEXT