ಲಂಡನ್: ಭಾರತಕ್ಕೆ ಮೂರನೇ ವಿಶ್ವಕಪ್ ತಂದುಕೊಡುವ ತುಡಿತದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದೆಹಲಿಯಲ್ಲಿರುವ ಅವರು ವಿದ್ಯಾಭ್ಯಾಸ ಮಾಡಿದ ಶಾಲೆಯು ವಿಶಿಷ್ಟ ರೀತಿಯಲ್ಲಿ ಬೆಂಬಲ ಸೂಚಿಸಿದೆ.
"ದೆಹಲಿಯ ಉತ್ತಮ್ ನಗರದಲ್ಲಿರುವ ವಿಶಾಲ್ ಭಾರತಿ ಪಬ್ಲಿಕ್ ಶಾಲೆಯಲ್ಲಿ ವಿರಾಟ್ ಕೊಹ್ಲಿ ತನ್ನ ಶಾಲಾ ದಿನಗಳನ್ನು ಸವೆಸಿದ್ದರು. ಈ ಶಾಲೆಯ ಮಣ್ಣಿನಲ್ಲಿ ಕ್ರಿಕೆಟ್ ಕಲಿತ ಕೊಹ್ಲಿ ಇಂದು ಇಂಗ್ಲೆಂಡ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವಷ್ಟು ಬಹು ಎತ್ತರಕ್ಕೆ ಬೆಳೆದಿದ್ದಾರೆ. ಇದನ್ನು ಸ್ಮರಿಸಿರುವ ವಿಶಾಲ್ ಭಾರತಿ ಶಾಲೆಯು, ಆವರಣದ ಮಣ್ಣನ್ನು ಲಂಡನ್‌ನಲ್ಲಿರುವ ವಿರಾಟ್‌ಗೆ ಕಳುಹಿಸಿದ್ದಾರೆ. ಆ ಮೂಲಕ ನಾಯಕನಿಗೆ ಅನನ್ಯ ಬೆಂಬಲ ಸೂಚಿಸಿದೆ" ಎಂದು ಸ್ಟಾರ್ ಸ್ಪೋರ್ಟ್ಸ್ ಟ್ವಿಟ್ ಮಾಡಿದೆ.
ವಿಶಾಲ್ ಭಾರತಿ ಶಾಲೆಯಲ್ಲಿ ಶಾಲಾ ಜೀವನ ಆರಂಭಿಸಿದ್ದ ಕೊಹ್ಲಿ ನಂತರ 9ನೇ ತರಗತಿಗೆ ಸೇವಿಯರ್ ಕಾನ್ವೆಂಟ್‌ಗೆ ಸೇರಿಕೊಂಡಿದ್ದರು. ವಿಶಾಲ್ ಭಾರತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ 1998ರಲ್ಲಿ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಕೊಹ್ಲಿ ಸೇರಿದ್ದರು. ಅಲ್ಲಿಂದ ಶುರುವಾದ ಅವರ ಕ್ರಿಕೆಟ್ ಜೀವನ ಕ್ರಿಕೆಟ್ ಜಗತ್ತಿನಲ್ಲೇ ಇಂದು ಶ್ರೇಷ್ಠ ಕ್ರಿಕೆಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಪ್ರಸಕ್ತ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜೂ.5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆರು ವಿಕೆಟ್‌ಗಳಿಂದ ಜಯಿಸಿತ್ತು. ಮುಂದಿನ ಪಂದ್ಯ ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಸೆಣಸಲಿದೆ. ಆಸೀಸ್ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos