ಲಂಡನ್: ಪಾಕಿಸ್ತಾನದ ಪ್ರಮುಖ ವೇಗಿ ಮಹಮದ್ ಆಮೀರ್ ಇತರೆ ಬೌಲರ್ ಗಳಂತೆ ಮತ್ತೋರ್ವ ಬೌಲರ್ ಅಷ್ಟೇ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕ್ ತಂಡಕ್ಕೆ ಟಾಂಗ್ ನೀಡಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯನ್ನು ಇನ್ನಿಲ್ಲದಂತೆ ಕಾಡಿದ್ದ ಮಹಮದ್ ಆಮಿರ್ ರನ್ನು ಸಾಮಾನ್ಯ ಬೌಲರ್ ಎಂದು ಹೇಳಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಮ್ಮ ಗುರಿ ಏನಿದ್ದರೂ ವಿಶ್ವಕಪ್ ಗೆಲುವಿನತ್ತ ಮಾತ್ರ. ಹೀಗಾಗಿ ಪ್ರತೀ ಪಂದ್ಯವೂ ನಮಗೆ ಮುಖ್ಯ ಎಂದು ಹೇಳಿದ್ದಾರೆ. ಅಂತೆಯೇ ಪಂದ್ಯದ ಕುರಿತು ಸೃಷ್ಟಿಯಾಗಿರುವ ಅಭಿಮಾನಿಗಳ ನಿರೀಕ್ಷೆಗಳ ಕುರಿತು ಮಾತನಾಡಿದ ಕೊಹ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಅಭಿಮಾನಿಗಳ ನಿರೀಕ್ಷೆ ಸಾಮಾನ್ಯ. ಆದರೆ ಆಟಗಾರರು ಎಲ್ಲರೀತಿಯ ಬಾಹ್ಯಾ ಒತ್ತಡಗಳನ್ನು ನಿರ್ವಹಿಸಿಕೊಂಡು ಆಡಬೇಕಾಗುತ್ತದೆ ಎಂದು ಹೇಳಿದರು.
ಇನ್ನು ಪಾಕಿಸ್ತಾನ ತಂಡದ ಕುರಿತು ಮಾತನಾಡಿದ ಕೊಹ್ಲಿ, ಪಾಕಿಸ್ತಾನವನ್ನು ನಾವು ಯಾವುದೇ ಕಾರಣಕ್ಕೂ ಕಡೆಗಣಿಸಿಲ್ಲ. ಪಂದ್ಯದ ಫಲಿತಾಂಶ ನನ್ನ ಪ್ರದರ್ಶನ ಅಥವಾ ಆಮಿರ್ ಪ್ರದರ್ಶನದ ಮೇಲೆ ಆಧಾರಿತವಾಗಿರುವುದಿಲ್ಲ. ಅದು ಉಭಯ ತಂಡಗಳ ಒಟ್ಟಾರೆ ಪ್ರದರ್ಶನದ ಮೇಲೆ ನಿರ್ಧರಿತವಾಗುತ್ತದೆ. ಯಾವ ತಂಡ ಉತ್ತಮವಾಗಿ ಆಡುತ್ತದೆಯೋ ಆ ತಂಡ ಗೆಲ್ಲಲಿದೆ. ಅಂತೆಯೇ ತಮ್ಮ ಮತ್ತು ಆಮೀರ್ ಕುರಿತ ಮಾಧ್ಯಮಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೊಹ್ಲಿ, ಟಿಆರ್ ಪಿಗಾಗಿ ನಾನು ಏನನ್ನೂ ಹೇಳುವುದಿಲ್ಲ. ಈ ಹಿಂದೆ ಕಗಿಸೋ ರಬಾಡ ವಿಚಾರದಲ್ಲೂ ಇದನ್ನೇ ಮಾಡಿದ್ದೆ. ನಾನು ಎದುರಿಸುವ ಯಾವುದೇ ಬೌಲರ್ ನನ್ನು ನಾನು ಗೌರವಿಸುತ್ತೇನೆ. ಅವರ ಕೌಶಲ್ಯವನ್ನು ನಾನು ಗೌರವಿಸುತ್ತೇನೆ. ಆಮಿರ್ ಕೂಡ ಉತ್ತಮ ಬೌಲರ್ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.