ಕ್ರಿಕೆಟ್

'ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಈ ತಂಡವನ್ನು ಮಣಿಸಿದ ತಂಡವೇ ವಿಶ್ವ ಚಾಂಪಿಯನ್ ಆಗಲಿದೆ'

Srinivasamurthy VN
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಈ ಪ್ರಬಲ ತಂಡವನ್ನು ಮಣಿಸುವವರೇ ಈ ಬಾರಿ ಚಾಂಪಿಯನ್ ಆಗಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಲೀಗ್ ಹಂತದ ಪಂದ್ಯಗಳು ಮುಕ್ತಾಯದತ್ತ ಸಾಗಿದ್ದು ಎಲ್ಲರ ಚಿತ್ತ ಇದೀಗ ಸೆಮಿ ಫೈನಲ್ ನತ್ತ ನೆಟ್ಟಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಪ್ರವೇಶ ಮಾಡಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯದ ಮೂಲಕ ಭಾರತ ಕೂಡ ಬಹುತೇಕ ಸೆಮಿಫೈನಲ್ ಪ್ರವೇಶ ಮಾಡಿದ್ದು, 3 ಮತ್ತು ನಾಲ್ಕನೇ ತಂಡಗಳಿಗಾಗಿ 4 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ನ್ಯೂಜಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇದೀಗ ಸೋಲು ಗೆಲುವಿನ ಲೆಕ್ಕಾಚಾರದೊಂದಿಗೆ ಇತರೆ ತಂಡಗಳ ಫಲಿತಾಂಶಗಳೂ ಕೂಡ ಈ ತಂಡಗಳ ಹಣೆ ಬರಹ ಬರೆಯಲಿದೆ. 
ಇನ್ನು ಹಾಲಿ ವಿಶ್ವಕಪ್ ಟೂರ್ನಿ ಕುರಿತಂತೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಭವಿಷ್ಯ ನುಡಿದ್ದು, ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡವನ್ನು ಯಾವ ತಂಡ ಸೋಲಿಸುತ್ತದೆಯೋ ಅದೇ ತಂಡ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.  
ಈ ಬಗ್ಗೆ ಮಾತನಾಡಿರುವ ಮೈಕಲ್ ವಾನ್, 'ಗೆಲುವಿನ ಲಯದಲ್ಲಿ ಮುಂದುವರಿಯುತ್ತಿರುವ ಭಾರತವನ್ನು ಯಾವ ತಂಡ ಸೋಲಿಸುತ್ತದೆಯೋ ಆ ತಂಡ ಐಸಿಸಿ ವಿಶ್ವಕಪ್‌ ಪ್ರಶಸ್ತಿ ಗೆಲ್ಲಲಿದೆ ಎಂದು ಹೇಳಿದ್ದಾರೆ. ಗುರುವಾರ ಭಾರತ 125 ರನ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ನಂತರ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್‌ ವಾನ್‌, 'ಭಾರತವನ್ನು ಸೋಲಿಸುವ ತಂಡ ಈ ಬಾರಿಯ ವಿಶ್ವಕಪ್ ಚಾಂಪಿಯನ್ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎರಡು ಬಾರಿ ವಿಶ್ವಚಾಂಪಿಯನ್ ಆಗಿರುವ ಭಾರತ ತಂಡ, ಪ್ರಸ್ತುತ ವಿಶ್ವಕಪ್ ನಲ್ಲಿ ಅದ್ಭುತ ಲಯದಲ್ಲಿದೆ. ಇದುವರೆಗೂ ಸೋಲನ್ನೇ ಕಾಣದ ಏಕೈಕ ತಂಡವಾಗಿ ಮುಂದುವರಿದಿದ್ದು, ಒಟ್ಟು ಆರು ಪಂದ್ಯಗಳಿಂದ ಐದರಲ್ಲಿ ಜಯಗಳಿಸುವುದರೊಂದಿಗೆ ( ಒಂದು ಪಂದ್ಯ ಮಳೆಯಿಂದ ರದ್ದಾಗಿದೆ) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ತನ್ನ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
SCROLL FOR NEXT