ನವದೆಹಲಿ: 12ನೇ ಆವೃತ್ತಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ರನ್ ನಿಂದ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು. ಆದರೆ 12ನೇ ಆವೃತ್ತಿಯಲ್ಲಿ ಅಂಪೈರ್ ಹಾಗೂ ಕೊಹ್ಲಿ, ಧೋನಿ ನಡುವಿನ ವಾಕ್ಸಮರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.
ವೈಡ್ ಬಾಲ್ ಕೊಡಲಿಲ್ಲ ಎಂದು ಕೀರಾನ್ ಪೊಲಾರ್ಡ್ ಆಕ್ರೋಶ!
ಚೆನ್ನೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೇಳೆ 19 ಓವರ್ ನ 3 ಎಸೆತವನ್ನು ಡ್ವೈನ್ ಬ್ರಾವೋ ವೈಡ್ ಗೆರೆಯಿಂದ ಆಚೆಗೆ ಎಸೆದರು. ಈ ವೇಳೆ ಪೊಲಾರ್ಡ್ ವಿಕೆಟ್ ನಿಂದ ಮುಂದೆ ಬಂದಿದ್ದರಿಂದ ಅಂಪೈರ್ ವೈಡ್ ಕೊಡಲಿಲ್ಲ. ಇದರಿಂದ ಬೇರಸಗೊಂಡ ಪೊಲಾರ್ಡ್ ಬ್ಯಾಟನ್ನು ಮೇಲಕ್ಕೆ ಎಸೆದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಇದರಿಂದ ಅಂಪೈರ್ ಗಳು ಪೊಲಾರ್ಡ್ ಗೆ ಪಂದ್ಯದ ಶೇ.25ರಷ್ಟು ದಂಡ ವಿಧಿಸಿದ್ದರು.
ಮಲಿಂಗ ನೋ ಬಾಲ್ ಗಮನಿಸಿದ ಅಂಪೈರ್!
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತವರಿನ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೇವಲ 6 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಮುಂಬೈ ನೀಡಿದ 188 ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಬೆಂಗಳೂರು ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ(46 ರನ್) ಹಾಗೂ ಸ್ಫೋಟಕ ಬ್ಯಾಟ್ಸಮನ್ ಎಬಿಡಿ ವಿಲಿಯರ್ಸ್ (ಅಜೇಯ 70 ರನ್) ಬೆನ್ನುವಾಗಿ ನಿಂತಿದ್ದರು. ಮಾಲಿಂಗ ಎಸೆದ ಅಂತಿಮ ಓವರ್ ನಲ್ಲಿ 10 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮಾಲಿಂಗ ಎಸೆದ ಕೊನೇ ಎಸೆತದಲ್ಲಿ ಆರ್ ಸಿಬಿ ಗೆಲುವಿಗೆ 7 ರನ್ ಅಗತ್ಯವಿತ್ತು. ಈ ವೇಳೆ ಶಿವಂ ದುಬೇ ಲಾಂಗ್ ಆನ್ ನತ್ತ ಚೆಂಡನ್ನು ಬಾರಿಸಿ 1 ರನ್ ಪೇರಿಸಿದ ಬೆನ್ನಲ್ಲಿಯೇ ಮುಂಬೈ ವಿಜಯೋತ್ಸವ ಆರಂಭಿಸಿತ್ತು. ಆದರೆ, ಮಾಲಿಂಗ ಎಸೆದ ಈ ಎಸೆತ ನೋಬಾಲ್ ಆಗಿದ್ದನ್ನು ಅಂಪೈರ್ ಎಸ್.ರವಿ ಗಮನಿಸಲಿಲ್ಲ. ಆದರೆ ಇದನ್ನು ಗಮನಿಸಿದ್ದ ಆರ್ ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲೇ ನೋಬಾಲ್ ನೋಬಾಲ್ ಎಂದು ಕೂಗಿದರು. ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋಬಾಲ್ ಆಗಿದ್ದರೂ ಅಂಪೈರ್ ಗಳ ಎಡವಟ್ಟಿನಿಂದ ಆರ್ ಸಿಬಿ ಸೋಲುವಂತಾಗಿತ್ತು. ಇದೀಗ ಅಂಪೈರ್ ಗಳ ವಿರುದ್ಧ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕಿಡಿಕಾರಿದ್ದು, ಇದೇನು ಕ್ಲಬ್ ಕ್ರಿಕೆಟ್ ಅಲ್ಲ ಹೇಳಿದ್ದಾರೆ.
ನೋಬಾಲ್ ಇಲ್ಲದಿದ್ದರೂ ಉಮೇಶ್ ಗೆ ನೋಬಾಲ್ ಕೊಟ್ಟ ಅಂಪೈರ್
ಮೇ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಹೈದರಾಬಾದ್ ನಡುವಿನ ಪಂದ್ಯದ ವೇಳೆ ವೇಗಿ ಉಮೇಶ್ ಯಾದವ್ ಇನ್ನಿಂಗ್ಸ್ ನ ಕೊನೆಯ ಓವರ್ ನ 5ನೇ ಎಸೆತವನ್ನು ನೋಬಾಲ್ ಎಂದು ಲಾಂಗ್ ತೀರ್ಪು ನೀಡಿದ್ದರು. ಆದರೆ ಟಿವಿ ರೀಪ್ಲೇನಲ್ಲಿ ಉಮೇಶ್ ಅವರ ಪಾದ ಗೆರೆಯ ಒಳಗೇ ಇರುವುದು ಸ್ಪಷ್ಟವಾಗಿತ್ತು. ಇದಕ್ಕೆ ಬೌಲರ್ ಉಮೇಶ್ ಯಾದವ್ ಮತ್ತು ಕೊಹ್ಲಿ ಕೂಡಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಲಾಂಗ್ ಮತ್ತು ಕೊಹ್ಲಿ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು. ಇನ್ನಿಂಗ್ಸ್ ಬ್ರೇಕ್ ವೇಳೆ ಅಂಪೈರ್ ಲಾಂಗ್ ರೂಂಗೆ ತೆರಳಿ ಅಲ್ಲಿ ಕೊಠಡಿಯ ಬಾಗಿಲು ಮುರಿದು ತಮ್ಮ ಕೋಪ ತಣಿಸಿಕೊಂಡಿದ್ದರು.
ಅಂಪೈರ್ ತೀರ್ಪಿನಿಂದ ಬೇಸರಗೊಂಡು ಬ್ಯಾಟ್ ನಿಂದ ಬೆಲ್ಸ್ ಬೀಳಿಸಿದ ರೋಹಿತ್!
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವೇಗಿ ಹ್ಯಾರಿ ಗರ್ನಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಇದಕ್ಕೆ ರೋಹಿತ್ ಡಿಆರ್ಎಸ್ ಗೆ ಮನವಿ ಮಾಡಿದ್ದರು. ಚೆಂಡು ಲೆಗ್ ಸ್ಟಂಪ್ ವಿಕೆಟ್ ತುದಿಗೆ ತಗುಲಿದ್ದರಿಂದ ಅಂಪೈರ್ ಮೈದಾನದ ಅಂಪೈರ್ ತೀರ್ಪಿಗೆ ಅನುಗುಣವಾಗಿ ಔಟ್ ತೀರ್ಪು ನೀಡಿದ್ದರು. ಇದರಿಂದ ನಿರಾಶೆಗೊಂಡ ರೋಹಿತ್ ಸುಮ್ಮನೆ ಹೋಗದೆ ಸ್ಟಂಪ್ಸ್ ಗಳ ಮೇಲೆ ಬ್ಯಾಟ್ ಬೀಸಿ ಹತಾಶೆ ಹೊರಹಾಕಿದ್ದರು.
ಸಹನೆ ಕಳೆದುಕೊಂಡು ಮೈದಾನಕ್ಕೆ ಬಂದು ಅಂಪೈರ್ ಜೊತೆ ಧೋನಿ ವಾಗ್ವಾದ!
ಮಿಸ್ಟರ್ ಕೂಲ್ ಅಂತಾನೇ ಫೇಮಸ್ ಆಗಿದ್ದ ಎಂಎಸ್ ಧೋನಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೈದಾನದ ಅಂಪೈರ್ ಗಳ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿ ಟೀಕೆಗೆ ಗುರಿಯಾಗಿದ್ದರು. 19.4ನೇ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಎಸೆದ ಸ್ಲೋ ಫುಲ್ ಟಾಸ್ ಚೆಂಡನ್ನು ಅಂಪೈರ್ ಉಲ್ಲಾಸ್ ನೋಬಾಲ್ ಅಂತ ಘೋಷಿಸಿದ್ರು. ಆದರೆ ಸ್ಕೇರ್ ಲೆಗ್ ನಲ್ಲಿ ಇದ್ದ ಮತ್ತೋರ್ವ ಅಂಪೈರ್ ಬ್ರೂಸ್ ಆಕ್ಸನ್ ಪೋರ್ಡ್ ಅದು ನೋ ಬಾಲ್ ಅಲ್ಲ ಲೀಗಲ್ ಡಿಲಿವರಿ ಅಂತ ಸಿಗ್ನಲ್ ನೀಡಿದ್ರು ಅಂಪೈರ್ ಗಳ ತೀರ್ಮಾನದಿಂದ ಕೋಪಗೊಂಡ ಧೋನಿ ಡಗೌಟ್ ನಿಂದ ಸಿದಾ ಫೀಲ್ಡ್ ಗೆ ಆಗಮಿಸಿದ್ರು. ಕೆಲ ಕಾಲ ಮಾಹಿ ಅಂಪೈರ್ ಗಳ ವಿರುದ್ಧ ವಾಗ್ವಾದ ನಡೆಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos