ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಗಂಗೂಲಿ ಸೇರಿ ಮೂರು ಭಾರತೀಯರು ವೀಕ್ಷಕ ವಿವರಣೆಗಾರರಾಗಿ ಆಯ್ಕೆ!

Srinivasamurthy VN
ದುಬೈ: ಐಸಿಸಿ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿದಂತೆ ಮೂವರು ಮಾಜಿ ಭಾರತೀಯ ಕ್ರಿಕೆಟಿಗರನ್ನು ವೀಕ್ಷಕ ವಿವರಣೆಗಾರರ ಪಟ್ಟಿಗೆ ಸೇರಿಸಲಾಗಿದೆ.
ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮುಂಬರುವ ಐಸಿಸಿ ವಿಶ್ವಕಪ್ ಟೂರ್ನಿಗೆ ವಿವಿಧ ದೇಶಗಳಿಂಗ ವೀಕ್ಷಕ ವಿವರಣೆದಾರರನ್ನು ಆಯ್ಕೆ ಮಾಡಿದ್ದು, ಈ ಪೈಕಿ ಭಾರತದಿಂದ ಮೂವರು ಮಾಜಿ ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಖ್ಯಾತ ವೀಕ್ಷಕ ವಿವರಣೆದಾರ ಮತ್ತು ಮಾಜಿ ಕ್ರಿಕೆಟಿಗ ಹರ್ಷಾ ಬೋಗ್ಲೆ ಮತ್ತು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರನ್ನು ವೀಕ್ಷಕ ವಿವರಣೆದಾರರ ಪಟ್ಟಿಗೆ ಸೇರಿಸಲಾಗಿದೆ.
ಒಟ್ಟು 24 ಮಂದಿಯ ವೀಕ್ಷಕ ವಿವರಣೆದಾರರ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಮಾಜಿ ಆಟಗಾರರಾದ ನಾಸಿರ್ ಹುಸೇನ್, ಮೈಕಲ್ ಕ್ಲಾರ್ಕ್, ಇಯಾನ್ ಬಿಷಪ್, ಮೆಲಾನಿ ಜೋನ್ಸ್, ಕುಮಾರ ಸಂಗಕ್ಕಾರ, ಮೈಕೆಲ್ ಅಥೆರ್ಟನ್, ಅಲಿಸನ್ ಮಿಚೆಲ್, ಬ್ರೆಂಡನ್ ಮೆಕ್ಕಲಮ್, ಗ್ರೇಮ್ ಸ್ಮಿತ್, ವಾಸಿಮ್ ಅಕ್ರಮ್, ಶಾನ್ ಪೊಲಾಕ್, ಮೈಕೆಲ್ ಸ್ಲೇಟರ್, ಮಾರ್ಕ್ ನಿಕೋಲಸ್, ಮೈಕೆಲ್ ಹೋಲ್ಡಿಂಗ್, ಇಸಾ ಗುಹಾ, ಪಮ್ಮಿ ಎಂ ಬೆಂಗ್ವಾ, ಸೈಮನ್ ಡೌಲ್, ಇಯಾನ್ ಸ್ಮಿತ್, ರಮೀಜ್ ರಾಜಾ, ಅಥರ್ ಅಲಿ ಖಾನ್ ಮತ್ತು ಇಯಾನ್ ವಾರ್ಡ್ ಅವರ ಹೆಸರು ವೀಕ್ಷಕ ವಿವರಣೆದಾರರ ಪಟ್ಟಿಯಲ್ಲಿದೆ.
ಇನ್ನು ಇದೇ ಮೇ 30ರಿಂದ ಐಸಿಸಿ ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇನ್ನು ಭಾರತ ತಂಡ ಜೂನ್ 5ರಿಂದ ತನ್ನ ಅಭಿಯಾನ ಆರಂಭಿಸಲಿದ್ದು, ಸೌಥ್ಯಾಂಪ್ಟನ್ ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
SCROLL FOR NEXT