ಕ್ರಿಕೆಟ್

ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತೀಯ ವನಿತೆಯರು, ದ. ಆಫ್ರಿಕಾ ವಿರುದ್ಧ 6 ರನ್ ರೋಚಕ ಜಯ!

Raghavendra Adiga

ವಡೋದರಾ: ದಕ್ಷಿಣ ಆಫ್ರಿಕಾ ವಿರುದ್ಧ  ಮೂರನೇ ಪಂದ್ಯದಲ್ಲೂ ಕೇವಲ ಆರು ರನ್‌ಗಳ ರೋಚಕ ಜಯ ಸಾಧಿಸಿ ಭಾರತ ಮಹಿಳಾ ತಂಡ 3-0 ಅಂತರದಲ್ಲಿ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಇಲ್ಲಿನ, ರಿಲೆಯನ್ಸ್‌ ಕ್ರೀಡಾಂಗಣದಲ್ಲಿ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ 45.5 ಓವರ್ ಗಳಲ್ಲಿ 146 ರನ್‌ಗಳಿಗೆ ತನ್ನೆೆಲ್ಲ ವಿಕೆಟ್ ಕಳೆದುಕೊಂಡಿತು. ಬಳಿಕ, 147 ರನ್ ಸಾಧಾರಣ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ 48 ಓವರ್‌ಗಳಿಗೆ 140 ರನ್ ಗಳಿಗೆ ಸರ್ವ ಪತನವಾಯಿತು. ಆ ಮೂಲಕ ಒಂದೂ ಪಂದ್ಯದಲ್ಲೂ ಜಯ ಸಾಧಿಸಲಾಗದ ಪ್ರವಾಸಿ ಆಫ್ರಿಕಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಹೀನಾಯವಾಗಿ ಸೋಲುಂಡಿತು.

ಭಾರತ ನೀಡಿದ್ದ ಕೇವಲ 147 ರನ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಜಯ ಸಾಧಿಸಲಿದೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ, ಕೇವಲ 146 ರನ್ ಆಫ್ರಿಕಾಗೆ ಬಹುದೊಡ್ಡ ಮೊತ್ತವಾಗಿ ಕಂಡಿತು. ಭಾರತದ ಬಿಗುವಿನ ದಾಳಿಯ ಎದುರು ಒಂದೊಂದು ರನ್ ಗಳಿಸುವುದು ಆಫ್ರಿಕಾಗೆ ಕಠಿಣವಾಗಿತ್ತು. ಲಿಜೆಲ್ಲೆೆ ಲೀ (13 ರನ್) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ಇವರ ಔಟ್ ಆದ ಬಳಿಕ  ತ್ರಿಷಾ ಚೆಟ್ಟಿ(7) ಏಕ್ತಾಾ ಬಿಸ್ಟ್‌‌ಗೆ ವಿಕೆಟ್ ಒಪ್ಪಿಸಿದರು. 

ಮಿಗೋನ್ ಡು ಪ್ರೀಜ್ (10), ಲಾರಾ ಗೂಡಾಲ್ (6), ಶಬ್ನಿಮ್ ಇಸ್ಮಾಯಿಲ್ (11) ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿದರು. ಆದರೆ, ಲೌರಾ (23) ಸುನೆ ಲೂಸ್ (24) ಹಾಗೂ ಮರಿಜಾನ್ನೆೆ ಕಪ್ (29) ಅವರು ಮಾತ್ರ ಕೊಂಚ ಹೊತ್ತು ಕ್ರೀಸ್‌ನಲ್ಲಿ ನಿಂತು ವೈಯಕ್ತಿಕ 20 ರನ್ ಗಳಿಸಿದರು. ಇವರನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ ವುಮೆನ್ ಗಳು 20 ರ ಗಡಿ ದಾಟಲೇ ಇಲ್ಲ.

ಭಾರತದ ಪರ ಅತ್ಯುತ್ತಮ ದಾಳಿ ನಡೆಸಿದ ಏಕ್ತಾ ಬಿಸ್ಟ್‌  ಮೂರು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಲಾ ಎರಡು ವಿಕೆಟ್ ಉರುಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರಿಯಾ ಪೂನಿಯಾ(0) ಹಾಗೂ ಜೆಮಿಮಾ ರೋಡ್ರಿಗಸ್(3) ಅವರು ತಂಡದ ಮೊತ್ತ ಐದು ರನ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಪೂನಮ್ ರಾವತ್(15) ಹಾಗೂ ನಾಯಕಿ ಮಿಥಾಲಿ ರಾಜ್(11) ಬಹುಬೇಗ ಔಟ್ ಆದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಹರ್ಮನ್ ಪ್ರೀತ್ ಕೌರ್ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಕೌರ್ ಅಮೋಘ ಬ್ಯಾಟಿಂಗ್ ಮಾಡಿದರು. 76 ಎಸೆತಗಳನ್ನು ಎದುರಿಸಿದ ಅವರು 38 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಇವರನ್ನು ಬಿಟ್ಟರೆ, ಶಿಖಾ ಪಾಂಡೆ ಅವರು ಕೂಡ ಕೆಲಕಾಲ ಉತ್ತಮ ಬ್ಯಾಟಿಂಗ್ ಮಾಡಿದರು. 40 ಎಸೆತಗಳನ್ನು ಎದುರಿಸಿದ ಅವರು 35 ರನ್ ಗಳಿಸಿದರು. ಇನ್ನುಳಿದಂತೆ ಎಲ್ಲ ಬ್ಯಾಟ್ಸ್  ವುಮೆನ್‍ಗಳು ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯಲಿಲ್ಲ.

ಆಫ್ರಿಕಾ ಪರ ಉತ್ತಮ ದಾಳಿ ನಡೆಸಿದ ಮರಿಜಾನ್ನೆ ಕಪ್ ಮೂರು ವಿಕೆಟ್ ಪಡೆದರು. ಶಬ್ನಿಮ್ ಉಸ್ಮಾಯಿಲ್ ಹಾಗೂ ಅಯಾಬೊಂಗ ಖಾಖ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ 

ಭಾರತ (ಮ): 45.5 ಓವರ್ ಗಳಲ್ಲಿ 146/10 (ಹರ್ಮನ್ ಪ್ರೀತ್ ಕೌರ್ 38, ಶಿಖಾ ಪಾಂಡೆ 35; ಮರಿಜಾನ್ನೆ ಕಪ್ 20 ಕ್ಕೆ 3, ಶಬ್ನಿಮ್ ಇಸ್ಮಾಯಿಲ್ 18 ಕ್ಕೆ 2, ಖಾಖ 33 ಕ್ಕೆ 2)
 ದಕ್ಷಿಣ ಆಫ್ರಿಕಾ: 48 ಓವರ್ ಗಳಲ್ಲಿ 140/10 (ಮರಿಜಾನ್ನೆೆ ಕಪ್ 29, ಸುನೆ ಲೂಸ್ 24, ಲೌರಾ 23; ಏಕ್ತಾ ಬಿಸ್ಟ್‌  32 ಕ್ಕೆೆ 3, ದೀಪ್ತಿ ಶರ್ಮಾ 24 ಕ್ಕೆೆ 2, ರಾಜೇಶ್ವರಿ ಗಾಯಕ್ವಾಡ್ 22 ಕ್ಕೆೆ 2)

SCROLL FOR NEXT