ಕ್ರಿಕೆಟ್

ಪ್ರತಿಭಟನೆಗೆ ಮಣಿದ ಬಾಂಗ್ಲಾ ಕ್ರಿಕೆಟ್ ಮಂಡಳಿ, ಆಟಗಾರರ ಮುಷ್ಕರ ವಾಪಸ್

Srinivasamurthy VN

ಢಾಕಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಂಗ್ಲಾದೇಶ ಕ್ರಿಕೆಟಿಗರು ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ.

ಆಟಗಾರರು ಮುಂದಿಟ್ಟದ್ದ 13 ಬೇಡಿಕೆಗಳ ಪೈಕಿ 11 ಬೇಡಿಕೆಗಳ ಈಡೇರಿಕೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಪ್ಪಿಗೆ ನೀಡಿದ್ದು, ಮಂಡಳಿ ನಡೆಸಿದ ಸಂಧಾನ ಸಭೆಯಲ್ಲಿನ ನಿರ್ಧಾರಕ್ಕೆ ಆಟಗಾರರು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ತಮ್ಮ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.

ಈ ಬಗ್ಗೆ ಸಂಧಾನಸಭೆ ಬಳಿಕ ಮಾತನಾಡಿದ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಪಪನ್ ಅವರು, ಸಭೆ ಫಲಪ್ರದವಾಗಿದ್ದು, ಆಟಗಾರರು ಮುಷ್ಕರ ಕೈ ಬಿಟ್ಟಿದ್ದಾರೆ. ಆಟಗಾರರು ಮುಂದಿಟ್ಟದ್ದ 13 ಬೇಡಿಕೆಗಳ ಪೈಕಿ 11 ಬೇಡಿಕೆಗಳ ಈಡೇರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಬಿಸಿಬಿಯ ಲಾಭಾಂಶದಲ್ಲಿ ಕೆಲ ಪ್ರಮಾಣದ ಲಾಭಾಂಶವನ್ನು ಆಟಾಗರರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಬಾಂಗ್ಲಾದ ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಅವರು, ಪಪನ್ ಅವರು ಹೇಳಿದಂತೆ ಸಂಧಾನ ಯಶಸ್ವಿಯಾಗಿದೆ. ನಾವು ಈಗಿನಿಂದಲೇ ಮುಷ್ಕರವನ್ನು ಕೈಬಿಟ್ಟಿದ್ದೇವೆ ಎಂದು ಹೇಳಿದ್ದಾರೆ. 

50ಕ್ಕೂ ಅಧಿಕ ದೇಶೀಯ ಆಟಗಾರರು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಂದಿಟ್ಟಿದ್ದರು. ಮುಷ್ಕರದಿಂದಾಗಿ ಮುಂದಿನ ತಿಂಗಳ ಬಾಂಗ್ಲಾದೇಶದ ಭಾರತ ಪ್ರವಾಸದ ಮೇಲೂ ಕರಿನೆರಳು ಬಿದ್ದಿತ್ತು. ಇದೀಗ ಮುಷ್ಕರ ವಾಪಸ್ ಆಗಿದ್ದು, ಬಾಂಗ್ಲಾದೇಶದ ಭಾರತ ಪ್ರವಾಸ ಖಚಿತವಾದಂತಾಗಿದೆ.

SCROLL FOR NEXT