ಢಾಕಾ: ಬಾಂಗ್ಲಾದೇಶ ಟೆಸ್ಟ್ ಹಾಗೂ ಟ್ವೆಂಟಿ-20 ನಾಯಕ ಶಕಿಬ್ ಅಲ್ ಹಸನ್ ವಿರುದ್ಧ ಮತ್ತಷ್ಟು ಗಂಭೀರವಾದ ಆರೋಪಗಳು ಹೊರಬಂದಿವೆ. ಮ್ಯಾಚ್ ಫಿಕ್ಸಿಂಗ್ ಸಂಬಂಧ ಬುಕ್ಕಿಗಳ ಸಂಪರ್ಕಿಸಿದರೂ ಆ ವಿವರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ತಿಳಿಸದಿರುವ ಹಿನ್ನಲೆಯಲ್ಲಿ ಶಕೀಬ್ ಅಲ್ ಹಸನ್ ಅವರನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.ನಿಷೇಧದ ಪರಿಣಾಮ ನವೆಂಬರ್ 3 ರಿಂದ ಪ್ರಾರಂಭವಾಗುವ ಭಾರತ ಪ್ರವಾಸದಿಂದ ಶಕಿಬ್ ಹೊರಗುಳಿಯಲಿದ್ದಾರೆ.
ಶಕೀಬ್‌ಗೆ ಒಂದು ವರ್ಷ ಪೂರ್ಣ ನಿಷೇಧ ಮತ್ತು 12 ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ.
ಬಾಂಗ್ಲಾದೇಶದ ಜನಪ್ರಿಯ ದೈನಿಕ 'ಸಮಕಲ್' ವರದಿ ಪ್ರಕಾರ, ಐಸಿಸಿ ಸೂಚನೆಯಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಶಕಿಬ್‌ರನ್ನು ಅಭ್ಯಾಸದಿಂದ ದೂರವಿರಿಸಿದೆ. ಇದೇ ಕಾರಣಕ್ಕಾಗಿ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಭಾರತ ವಿರುದ್ಧ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಮಾತುಕತೆಯಿಂದಲೂ ಹೊರಗಿರಿಸಲಾಗಿತ್ತು.
ಭಾರತದ ವಿರುದ್ಧದ ಸರಣಿಯು ಮೂರು ಟಿ 20 ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ.
"ನಾನು ಪ್ರೀತಿಸುವ ಆಟದಿಂದ ನಿಷೇಧಿಸಲ್ಪಟ್ಟಿದ್ದಕ್ಕೆ ನಾನು ತುಂಬಾ ದುಃಖಿತನಾಗಿದ್ದೇನೆ, ಆದರೆ ಕಾರಣಗಳ ಸಹಿತ ವರದಿ ಮಾಡದಿದ್ದಕ್ಕಾಗಿ ತೀರ್ಪನ್ನು ಸಂಪೂರ್ಣವಾಗಿ ಸ್ವೀಕರಿಸುತ್ತೇನೆ." ಶಕೀಬ್ ಹೇಳಿದ್ದಾರೆ.
ಅವರು ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು 2020 ರ ಅಕ್ಟೋಬರ್ 18 ರಿಂದನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಟಿ 20 ಸರಣಿಯಲ್ಲಿ ಸಹ ಭಾಗವಹಿಸುವುದರಿಂದ ವಂಚಿತರಾಗಲಿದ್ದಾರೆ.
ಇನ್ನು ಶಕೀಬ್ ಅನುಪಸ್ಥಿತಿಯಲ್ಲಿ ಭಾರತ ವಿರುದ್ಧದ ಸರಣಿಗೆ ಬಾಂಗ್ಲಾ ತಂಡ ಪುನರ್ರಚನೆಯಾಗಬೇಕಿದೆ.ಶಕೀಬ್ ಬದಲಿಗೆ ಹಿರಿಯ ಅನುಭವಿ, ಹೆಚ್ಚುವರಿ ಆಟಗಾರ ಮುಷ್ಫಿಕೂರ್ ರಹೀಮ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.ಅಲ್ಲದೆ ಮಹಮದುಲ್ಲಾ ರಿಯಾದ್ ಮೊಸದ್ದೇಕ್ ಹೊಸೈನ್ ಇವರುಗಳಲ್ಲಿ ಒಬ್ಬರು ಮೂರು ಟಿ 20 ಪಂದ್ಯಗಳಲ್ಲಿ ನಾಯಕನಾಗಿರುತ್ತಾರೆ.
ಎರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಸಂಬಂಧಪಟ್ಟಂತೆ ಬುಕ್ಕಿಗಳಿಂದ ಶಕಿಬ್ ಭಾರಿ ಆಫರ್ ಗಿಟ್ಟಿಸಿಕೊಂಡಿದ್ದರು. ಈ ವಿವರವನ್ನು ಶಕಿಬ್, ಐಸಿಸಿ ಭ್ರಷ್ಟಾಚಾರ ತಡೆ ಮತ್ತು ಸುರಕ್ಷಾ ವಿಭಾಗಕ್ಕೆ (ಎಸಿಎಸ್‌ಯು) ವರದಿ ಮಾಡದೇ ಗೌಪ್ಯವಾಗಿಟ್ಟುಕೊಂಡಿದ್ದರು.