ಕ್ರಿಕೆಟ್

ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಸಂಬಳದಲ್ಲಿ ಭಾರಿ ಏರಿಕೆ! ಎಷ್ಟು ಗೊತ್ತಾ?

Nagaraja AB

ನವದೆಹಲಿ: 2021ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ವರೆಗೂ ಗುತ್ತಿಗೆಯನ್ನು ವಿಸ್ತರಿಸಿದ ನಂತರ ಟೀಂ ಇಂಡಿಯಾ ಮುಖ್ಯ ಕೋಚ್  ರವಿಶಾಸ್ತ್ರಿ ಅವರ ಸಂಬಳದಲ್ಲಿ ಭಾರಿ ಏರಿಕೆ ಆಗಿದೆ.  ರವಿಶಾಸ್ತ್ರೀ ಅವರ ಹೊಸ ಒಪ್ಪಂದದ ಪ್ರಕಾರ ವರ್ಷಕ್ಕೆ 10 ಕೋಟಿಯಷ್ಟು ಸಂಬಳ ಪಡೆಯಲಿದ್ದಾರೆ.

ಈ ಹಿಂದೆ ರವಿಶಾಸ್ತ್ರಿ ಅವರಿಗೆ ಬಿಸಿಸಿಐ 8 ಕೋಟಿ ರೂ. ಪಾವತಿಸುತಿತ್ತು. ಆದರೆ, ಗುತ್ತಿಗೆ ಅವಧಿ ನವೀಕರಣದ ನಂತರ ಸಂಬಳದಲ್ಲಿ ಶೇ. 20 ರಷ್ಟು ಹೆಚ್ಚಳ ಮಾಡಲಾಗಿದೆ. 

ರವಿಶಾಸ್ತ್ರಿ ಜೊತೆಗೆ ಇತರ ಸಹಾಯಕ ಸಿಬ್ಬಂದಿ ಸಂಬಳದಲ್ಲೂ ಏರಿಕೆಯಾಗಿದೆ. ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ತಲಾ 3. 5 ಕೋಟಿ ರೂ. ವಿಕ್ರಮ್ ಠಾಥೋಡ್  ಹಾಗೂ ಹೊಸದಾಗಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ ಕೋಚಿಂಗ್ ಸಿಬ್ಬಂದಿ 2.5 ರಿಂದ 3 ಕೋಟಿ ರೂ. ಸಂಬಳ ಪಡೆಯಲಿದ್ದಾರೆ.

2007ರಲ್ಲಿ ಟೀಂ ಇಂಡಿಯಾ ಮ್ಯಾನೇಜರ್ ಆಗಿದ್ದ ರವಿಶಾಸ್ತ್ರೀ, 2014- 2016ರ ಅವಧಿಯಲ್ಲಿ ಟೀಂ ಇಂಡಿಯಾ ನಿರ್ದೇಶಕರಾಗಿದ್ದರು. 2017ರಲ್ಲಿ  ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ನಂತರ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ರವಿಶಾಸ್ತ್ರಿ ಮುಖ್ಯ ಕೋಚ್ ಅವಧಿಯಲ್ಲಿ ಟೀಂ ಇಂಡಿಯಾ ಟೆಸ್ಟ್  ನಲ್ಲಿ ಅಗ್ರಸ್ಥಾನದಲ್ಲಿದ್ದರೆ 2017ರ ಚಾಂಪಿಯನ್ ಟ್ರೋಫಿ ಹಾಗೂ 2019ರ ವಿಶ್ವಕಪ್ ಟೂರ್ನಿಯಲ್ಲಿ ಕ್ರಮವಾಗಿ ಫೈನಲ್ ಹಾಗೂ ಸೆಮಿಫೈನಲ್ ಪ್ರವೇಶಿಸಿತ್ತು.

SCROLL FOR NEXT