ಕ್ರಿಕೆಟ್

ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಗುತ್ತಿಗೆ ಆಟಗಾರರ ಬಾಕಿ ಪಾವತಿಸಿದ ಬಿಸಿಸಿಐ

Nagaraja AB

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೂ ಎಲ್ಲಾ ಕೇಂದ್ರ ಗುತ್ತಿಗೆ ಆಟಗಾರರ ತ್ರೈಮಾಸಿಕದ ಬಾಕಿಯನ್ನು ಬಿಸಿಸಿಐ ಪಾವತಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಇತರ ರಾಷ್ಟ್ರಗಳಲ್ಲಿ ಆರ್ಥಿಕ ಹಿನ್ನಡೆಗೆ ಕಾರಣವಾಗಿದ್ದು, ಯಾವುದೇ ಆಟಗಾರರಿಗೆ  ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಬಿಸಿಸಿಐ ಪ್ರತಿಜ್ಞೆ ಮಾಡಿದೆ. 

ವಿಶ್ವದಾದ್ಯಂತ 95 ಸಾವಿರ ಜನರನ್ನು ಕೊರೋನಾವೈರಸ್ ಬಲಿಪಡೆದುಕೊಂಡಿದ್ದು, ಜಾಗತಿಕ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಆಟಗಾರರ ವೇತನವನ್ನು ಕಡಿತ ಮಾಡುವುದಾಗಿ ಸೂಚಿಸಿವೆ.

ಭಾರತ ಹಾಗೂ ಭಾರತ ಎ ಪರ ಆಡಿದ  ಆಟಗಾರರ ಎಲ್ಲಾ ಬಾಕಿಯನ್ನು ಆರ್ಥಿಕ ವರ್ಷದ ಕೊನೆಯಲ್ಲಿ ಪಾವತಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ಇತರ ಕ್ರಿಕೆಟ್ ಮಂಡಳಿಗಳು ತಮ್ಮ ದೇಶಿಯ ಆಟಗಾರರಿಗೂ ವೇತನ ಪಾವತಿಸಲು ಕಷ್ಟಪಡುತ್ತಿರುವಾಗ ಬಿಸಿಸಿಐ ತನ್ನೆಲ್ಲಾ ಆಟಗಾರರನ್ನು ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಂತಾರಾಷ್ಟ್ರೀಯ ಆಟಗಾರರಾಗಲೀ ಅಥವಾ ದೇಶಿಯ ಆಟಗಾರರಾಗಲೀ ಯಾರಿಗೂ ತೊಂದರೆಯಾಗಲ್ಲ ಎಂದು ಅವರು ಹೇಳಿದ್ದಾರೆ. 

ಆದಾಗ್ಯೂ, ಪಾಲುದಾರರ ಭರಿಸಬೇಕಾದ ಹಣಕಾಸು ನಷ್ಟದ ಪ್ರಮಾಣವನ್ನು ಪರಿಗಣಿಸಿ ಈ ವರ್ಷದ ಅಂತ್ಯದಲ್ಲಿ ಐಪಿಎಲ್ ನಡೆಯುವ ಅಗತ್ಯವಿದೆ, ಆದರೆ, ಯಾವಾಗ ನಡೆಯಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

SCROLL FOR NEXT