ಕ್ರಿಕೆಟ್

ಲಾಕ್‌ಡೌನ್‌ ಸಮಯದಲ್ಲಿ ಫಿಕ್ಸಿಂಗ್‌ ಭೂತ; ಕ್ರಿಕೆಟಿಗರಿಗೆ ಐಸಿಸಿ ಎಚ್ಚರಿಕೆ!

Srinivasamurthy VN

ಲಂಡನ್: ಕೊರೊನಾ ವೈರಸ್‌ ನಿಯಂತ್ರಿಸುವ ಉದ್ಧೇಶದಿಂದ ವಿಶ್ವದೆಲ್ಲೆಡೆ ಹಲವು ರಾಷ್ಟ್ರಗಳು ಲಾಕ್‌ಡೌನ್‌ ಹೇರಿವೆ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕ್ರಿಕೆಟ್‌ ಜಗತ್ತು ಕೂಡ ಸ್ತಬ್ಧವಾಗಿದೆ.

ಲಾಕ್‌ಡೌನ್‌ ದಿನಗಳಲ್ಲಿ ಬಹುತೇಕ ಕ್ರಿಕೆಟರ್ಸ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು, ವಿವಿಧ ರೀತಿಯ ಜಾಗ್ರತಾ ವಿಡಿಯೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅಭಿಮಾನಿಗಳೊಟ್ಟಿಗೆ ಚರ್ಚೆಯಲ್ಲಿ ತೊಡಗಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. 

ಆದರೆ ಇತ್ತ ಕೆಲ ಬುಕ್ಕಿಗಳು ಮ್ಯಾಚ್‌ ಫಿಕ್ಸಿಂಗ್‌ ಮತ್ತು ಸ್ಪಾಟ್ ಫಿಕ್ಸಿಂಗ್‌ನಂತಹ ಮೋಸದಾಟಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಆಟಗಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲ ಬುಕ್ಕೀಗಳು ಕ್ರಿಕೆಟಿಗರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿರುವ ಅಚ್ಚರಿಯ  ಸಂಗತಿಯನ್ನು ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ ಅಲೆಕ್ಸ್‌ ಮಾರ್ಷಲ್‌ ಬಾಯ್ಬಿಟ್ಟಿದ್ದಾರೆ. 

ದಿ ಗಾರ್ಡಿಯನ್‌ ಪತ್ರಿಕೆಗೆ ನೀಡಿರುವ ಸಂರ್ಶನದಲ್ಲಿ ಮಾರ್ಷಲ್‌ ಹೇಳಿರುವಂತೆ, ಸೋಷಿಯಲ್‌ ಮೀಡಿಯಾಗಳ ಮೂಲಕ ಕ್ರಿಕೆಟಿಗರ ಸಂಪರ್ಕಕ್ಕೆ ಬಂದು ಅವರ ಸ್ನೇಹ ಸಂಪಾದಿಸಿ ಬಳಿಕ ತಮಗೆ ಅಗತ್ಯದ ಸಮಯದಲ್ಲಿ ಅದರ ದುರುಪಯೋಗ ಪಡಿಸಿಕೊಳ್ಳುವ ಎಲ್ಲಾ ರೀತಿಯ ಹುನ್ನಾರ  ಚಾಲ್ತಿಯಲ್ಲಿದೆ. ಈಗಾಗಲೇ ಕ್ರಿಕೆಟ್‌ ಲೋಕದಲ್ಲಿ ಮೋಸದಾಟ ನಡೆಸಿ ಸಿಕ್ಕಿಬಿದ್ದಿರುವ ವ್ಯಕ್ತಿಗಳೇ ಸೋಷಿಯಲ್‌ ಮೀಡಿಯಾ ಮೂಲಕ ಕ್ರಿಕೆಟಿಗರನ್ನು ಸಪರ್ಕಿಸಿ ಬಾಂಧವ್ಯ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಅದರ ಲಾಭ ಪಡೆಯುವ ದುರುದ್ದೇಶ  ಹೊಂದಿದ್ದಾರೆ. ಕೋವಿಡ್‌-19 ನಿಂದಾಗಿ ಜಗತ್ತಿನಾದ್ಯಂತ ಕ್ರಿಕೆಟ್‌ ಸ್ತಬ್ಧವಾಗಿರಬಹುದು ಆದರೆ ಫಿಕ್ಸರ್‌ಗಳು ಸಿಕ್ಕಾಪಟ್ಟೆ ಚುರುಕಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಈಗಾಗಲೇ ಎಲ್ಲಾ ಸದಸ್ಯತ್ವ ಕ್ರಿಕೆಟ್‌ ಮಂಡಳಿಗಳಿಗೆ, ಆಟಗಾರರಿಗೆ ಮತ್ತು ಅವರ ಸಿಬ್ಬಂದಿ ಬಳಗವನ್ನು ಸಂಪರ್ಕಿಸಿ ಎಚ್ಚರಿಕೆ ನೀಡಲಾಗಿದ್ದು. ಇಂತಹ ಅಪಾಯಕಾರಿ ಆಹ್ವಾನಗಳಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ನಮ್ಮ ಆಟಗಾರರು ಪರಿಸ್ಥಿತಿ  ಅರ್ಥಮಾಡಿಕೊಂಡು ಸರಿಯಾದ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.

SCROLL FOR NEXT