ಕ್ರಿಕೆಟ್

ಪರಸ್ಪರರನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು: ದೆಹಲಿ ಹಿಂಸಾಚಾರದ ಕುರಿತು ಯುವಿ, ಸೆಹ್ವಾಗ್ ವಿಷಾಧ

Srinivasamurthy VN

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದು, ಪರಸ್ಪರರನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. ಅಲ್ಲದೆ ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೂ ಕನಿಷ್ಠ 22 ಮಂದಿ ಬಲಿಯಾಗಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ನೂರಾರು ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ವಾಹನಗಳು, ಮನೆ, ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. 

ಇದೇ ವಿಚಾರವಾಗಿ ಇದೀಗ ಕ್ರಿಕೆಟಿಗರಾದ ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. 

'ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ದುರದೃಷ್ಟಕರವಾದದ್ದು. ಶಾಂತವಾಗಿರುವಂತೆ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಯಾರೊಬ್ಬರಿಗೆ ಆಗುವ ಗಾಯ ಅಥವಾ ಯಾರೊಬ್ಬರು ಮಾಡುವ ದಾಳಿಯು ರಾಷ್ಟ್ರ ರಾಜಧಾನಿಗೆ ಅಂಟುವ ಕಳಂಕವಾಗಲಿದೆ. ಶಾಂತಿ ಮೂಡಲಿ ಮತ್ತು ಎಲ್ಲರಿಗೂ ತಿಳುವಳಿಕೆ ಬರಲೆಂದು ಆಶಿಸುತ್ತೇನೆ ಎಂದು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಬರೆದುಕೊಂಡಿದ್ದಾರೆ.

ಅಂತೆಯೇ ಯುವರಾಜ್‌ ಸಿಂಗ್‌ ಕೂಡ ಪ್ರತಿಕ್ರಿಯೆ ನೀಡಿದ್ದು, 'ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವು ಹೃದಯವನ್ನು ಘಾಸಿಗೊಳಿಸುವಂತದ್ದು. ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಪ್ರತಿಯೊಬ್ಬರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಏನೇ ಆದರೂ ಕೊನೆಗೆ ನಾವೆಲ್ಲರೂ ಮನುಷ್ಯರೇ. ನಮೆಗೆಲ್ಲ ಪ್ರೀತಿ, ಗೌರವದ ಅಗತ್ಯವಿದೆ. ನಾವು ಪರಸ್ಪರರನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು ಎಂದು ಕರೆ ನೀಡಿದ್ದಾರೆ.

ಅಂತೆಯೇ ನಮ್ಮವರೇ ನಮ್ಮವರನ್ನೇಕೆ ಕೊಲ್ಲುತ್ತಿದ್ದಾರೆ, ದ್ವೇಷ ಬೇಡ.. ಶಾಂತಿ ಕಾಪಾಡುವಂತೆ ಹರ್ಭಜನ್‌ ಸಿಂಗ್‌ ಅವರೂ ಮನವಿ ಮಾಡಿದ್ದಾರೆ.

SCROLL FOR NEXT