ಕ್ರಿಕೆಟ್

ಎಂ.ಎಸ್. ಧೋನಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ: ಚಾಹಲ್

Shilpa D

ನವದೆಹಲಿ: ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಭವಿಷ್ಯ ಇನ್ನೂ ನಿಗೂಢವಾಗಿದೆ. ಆದಾಗ್ಯೂ, ಟೀಮ್ ಇಂಡಿಯಾ ಆಟಗಾರರು ಮಾತ್ರ ದಿಗ್ಗಜ ಆಟಗಾರನ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ.

ಬಿಸಿಸಿಐನ ಪರವಾಗಿ ಭಾರತ ತಂಡದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಾಹಲ್‌ ನಡೆಸಿಕೊಡುವ ಚಾಹಲ್‌ ಟಿವಿ ಕಾರ್ಯಕ್ರಮದಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಭಾರತ ತಂಡ ಪ್ರಸ್ತುತ ನ್ಯೂಜಿಲೆಂಡ್‌ ಪ್ರವಾಸದಲ್ಲಿದೆ. ಚಾಹಲ್‌ ತಮ್ಮ ಕಾರ್ಯಕ್ರಮದ ಮೂಲಕ ಭಾರತ ತಂಡದ ಬಸ್‌ನ ಒಳಗಿನ ನೋಟವನ್ನು ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ. 

ಭಾರತ ತಂಡ ಎಲ್ಲೇ ಹೋದರೂ ತಂಡದ ಬಸ್‌ನ ಹಿಂಬದಿಯಲ್ಲಿರುವ ಬಲ ಭಾಗದ ಕಾರ್ನರ್‌ ಸೀಟ್‌ ಮಾಜಿ ನಾಯಕ ಎಂಎಸ್‌ ಧೋನಿ ಅವರಿಗೆ ಮೀಸಲಿಟ್ಟಿರುವ ಸಂಗತಿ ಬಹಿರಂಗವಾಗಿದೆ. ಈಗಲೂ ತಂಡದ ಆಟಗಾರರು ಧೋನಿ ಬರುವಿಕೆಯನ್ನು ಎದುರು ನೋಡುತ್ತಿದ್ದು, ಅವರಿಗೆ ಮೀಸಲಿಟ್ಟಿರುವ ಸೀಟ್‌ನಲ್ಲಿ ಯಾರೊಬ್ಬರೂ ಕುಳಿತುಕೊಳ್ಳುವುದಿಲ್ಲ ಅದು ಖಾಲಿ ಉಳಿದಿರುತ್ತದೆ ಎಂದು ಚಾಹಲ್‌ ಮಹತ್ವದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 

ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿದ್ದು, 3ನೇ ಪಂದ್ಯ ಸಲುವಾಗಿ ಆಕ್ಲೆಂಡ್‌ನಿಂದ ಹ್ಯಾಮಿಲ್ಟನ್‌ಗೆ ಬಸ್‌ ಮಾರ್ಗವಾಗಿ ಪ್ರಯಾಣಿಸುವ ವೇಳೆ ಚಾಹಲ್‌ ಈ ಒಂದು ವೀಡಿಯೋ ಮಾಡಿದ್ದಾರೆ.

"ಚಾಹಲ್‌ ಟಿವಿಯಲ್ಲಿ ಈವರೆಗೆ ಒಬ್ಬ ಆಟಗಾರ ಮಾತ್ರ ಕಾಣಿಸಿಕೊಂಡಿಲ್ಲ. ಒಂದೆರಡು ಬಾರಿ ಅವರು ಬರಲು ಮನಸ್ಸು ಮಾಡಿ ನನಗೆ ಮನವಿ ಮಾಡಿದ್ದರು ಕೂಡ. ಆದರೆ ನಾನೇ ಈಗ ಬೇಡವೆಂದಿದ್ದೆ. ಆ ದಿಗ್ಗಜ ಆಟಗಾರ ಬೇರಾರು ಅಲ್ಲ ಅವರು ಧೋನಿ. ಅವರು ಸದಾ ಇದೇ ಸೀಟ್‌ನಲ್ಲಿ ಕುಳಿತುಕೊಳ್ಳುತ್ತಿದ್ದರು. ಈಗ ಈ ಸೀಟ್‌ನಲ್ಲಿ ಬೇರೆ ಯಾರೂ ಕುಳಿತುಕೊಳ್ಳುವುದಿಲ್ಲ. ನಾವೆಲ್ಲರೂ ಅವರನ್ನು ಬಹಳ ಮಿಸ್‌ ಮಾಡ್ಕೊತೀವಿ," ಎಂದು ಚಹಲ್‌ ಹೇಳಿದ್ದಾರೆ.

2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತ ಬಳಿಕ ಎಂಎಸ್‌ ಧೋನಿ ತೆರೆ ಮರೆ ಸರಿದಿದ್ದಾರೆ. ಅನಿರ್ಧಿಷ್ಟಾವಧಿ ಕಾಲ ವಿಶ್ರಾಂತಿ ಮೊರೆ ಹೋಗಿರುವ ಧೋನಿ, ಮರಳಿ ಅಂಗಣಕ್ಕೆ ಇಳಿಯುವುದು ಯಾವಾಗ ಎಂದು ಅಭಿಮಾನಿಗಳು ಬಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.

ಇದೇ ವೇಳೆ ಧೋನಿ ಏಕದಿನ ಕ್ರಿಕೆಟ್‌ಗೆ ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದು ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಕುರಿತಾಗಿ ಭಾರತ ತಂಡದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಹೇಳಿದ್ದರು. ಮುಂಬರುವ ಐಪಿಎಲ್‌ನಲ್ಲಿ ಧೋನಿ ಆಡುವುದು ನಿಶ್ಚಿತವಾಗಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಅಬ್ಬರಿಸಿದರೆ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಧೋನಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಲಿದೆ.

SCROLL FOR NEXT