ಕ್ರಿಕೆಟ್

ಕೊರೋನಾ ನಿಯಮ ಉಲ್ಲಂಘಿಸಿದ ಜೋಫ್ರಾ ಆರ್ಚರ್ 2ನೇ ಟೆಸ್ಟ್ ನಿಂದ ಔಟ್!

Vishwanath S

ಲಂಡನ್: ಮಹಾಮಾರಿ ಕೊರೋನಾ ವೈರಸ್ ಭೀತಿಯ ನಡುವೆಯೂ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಜೋಫ್ರಾ ಆರ್ಚರ್ ಅವರನ್ನು ಎರಡನೇ ಪಂದ್ಯದಿಂದ ಕೈಬಿಡಲಾಗಿದೆ. 

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಇಂದಿನಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಪಂದ್ಯದಿಂದ ಜೋಫ್ರಾರನ್ನು ಹೊರಗಿಡಲಾಗಿದೆ. ಇನ್ನು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದ ಜೋಫ್ರಾ ಅವರನ್ನು ಐದು ದಿನಗಳ ಕಾಲ ಐಸೋಲೇಶನ್ ಗೆ ಒಳಪಡಿಸಲಾಗಿದೆ. 

ಈ ವೇಳೆ ಜೋಫ್ರಾರ ಗಂಟಲು ದ್ರವ ಪರೀಕ್ಷೆ ನಡೆಸಲಿದ್ದು ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ಅವರ ಐಸೋಲೇಶನ್ ಅವಧಿ ಮುಗಿಯಲಿದೆ. ಇನ್ನು ದ್ವಿತೀಯ ಪಂದ್ಯದ 13ರ ಬಳಗದಲ್ಲಿ ಆರ್ಚರ್ ಸ್ಥಾನ ಪಡೆದಿದ್ದರು.

ನಾನು ಮಾಡಿರುವ ತಪ್ಪಿಗೆ ಕ್ಷಮಾಪಣೆಯನ್ನು ಕೇಳುತ್ತಿದ್ದೇನೆ. ನನ್ನ ತಪ್ಪಿನ ನಿರ್ಧಾರ ಇಡೀ ತಂಡ ಹಾಗೂ ಮ್ಯಾನೇಜ್ ಮೆಂಟ್ ಅನ್ನು ಅಪಾಯಕ್ಕೆ ಸಿಲುಕುವಂತೆ ಮಾಡಿದೆ. ಈ ಜೈವಿಕ ಸುರಕ್ಷತಾ ವಲಯದಲ್ಲಿರುವ ಪ್ರತಿಯೊಬ್ಬರಿಗೂ ನಾನು ಪ್ರಮಾಣಿಕವಾಗಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. 

ಜೈವಿಕ ಸುರಕ್ಷತಾ ವಲಯದಲ್ಲಿರುವವರು ತಂಡವನ್ನು ಬಿಟ್ಟು ಹೊರಗೆ ಹೋಗಬಾರದು. ಆದರೆ ಆರ್ಚರ್ ಅವರು ಸೌಥಂಪ್ಟನ್ ನಿಂದ ಮ್ಯಾನ್ಚೆಸ್ಟರ್ ಗೆ ಪ್ರಯಾಣಿಸುವಾಗ ಆರ್ಚರ್ ಅವರು ಬ್ರಿಡ್ಜ್ ಟೌನ್ ನಲ್ಲಿರುವ ತಮ್ಮ ಫ್ಲಾಟ್ ಗೆ ಹೋಗಿ ಬಂದಿದ್ದರು. ಇದು ಆಟಗಾರರಿಗೆ ಅಳವಡಿಸಿದ್ದ ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಪತ್ತೆ ಹಚ್ಚಲಾಗಿದ್ದು ನಿಯಮ ಉಲ್ಲಂಘಿಸಿ ಆರೋಪದ ಮೇಲೆ ಆರ್ಚರ್ ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. 

SCROLL FOR NEXT