ನವದೆಹಲಿ: ಟಿ20 ವಿಶ್ವಕಪ್ ಮುಂದೂಡಿಕೆ ಸಾಧ್ಯತೆಯೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಕಳೆದ ವಾರ ಟಿ 20 ಲೀಗ್‌ಗೆ ತಯಾರಿ ಆರಂಭಿಸುವುದಾಗಿ ತಿಳಿಸಿದ ನಂತರ, ತಾತ್ಕಾಲಿಕ ವೇಳಾಪಟ್ಟಿಯನ್ನು ಸಹ ರಚಿಸಲಾಗಿದೆ ಎಂದು ವರದಿಯೊಂದು ಹೇಳಿದೆ.
ಪ್ರಸಿದ್ದ ಪತ್ರಿಕೆಯೊಂದರ ಪ್ರಕಾರ ಸೆಪ್ಟೆಂಬರ್ 26 ರಿಂದ ನವೆಂಬರ್ 8 ರ ನಡುವೆ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಯೋಜಿಸಿದೆ - 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಭಾರತದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ಪಂದ್ಯಾವಳಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ನಡೆಯುವ ಸಾಧ್ಯತೆಯಿದೆ. ಐಪಿಎಲ್ ಪಂದ್ಯಗಳ ಸ್ಥಳಾಂತರ ಕುರಿತ ಅಂತಿಮ ತೀರ್ಮಾನವು ಕೇಂದ್ರ ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ
ಆದಾಗ್ಯೂ, ಪಂದ್ಯಾವಳಿಯ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಇಂಡಿಯಾದಿಂದ ವೇಳಾಪಟ್ಟಿ ಕುರಿತಂತೆ ಆಕ್ಷೇಪ ವ್ಯಕ್ತವಾಗಿದೆ. ಉದ್ಯಮವು ಮಹತ್ವದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಜಾಹೀರಾತುಗಳನ್ನು ಆಕರ್ಷಿಸುವ ಉದ್ದೇಶದಿಂದ ದೀಪಾವಳಿ ವಾರಾಂತ್ಯದಲ್ಲಿ (ನವೆಂಬರ್ 14) ಬಿಸಿಸಿಐ ಐಪಿಎಲ್ ಅನ್ನು ನಡೆಸಬೇಕೆಂದು ಸ್ಟಾರ್ ಬಯಸಿದೆ . ದೀಪಾವಳಿ ವಾರಾಂತ್ಯದಲ್ಲಿ ಐಪಿಎಲ್ ಮುಕ್ತಾಯಗೊಳ್ಳಬೇಕೆಂದು ಸ್ಟಾರ್ಇಂಡಿಯಾ ಅಭಿಪ್ರಾಯಪಟ್ಟಿದೆ ಎಂದು ವರದಿ ಹೇಳಿದೆ.
ಮತ್ತೊಂದೆಡೆ, ಬಿಸಿಸಿಐ ತನ್ನ ಮುಂಚಿನ ಯೋಜನೆಯಂತೆ ಡೌನ್ ಅಂಡರ್ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಕೊಟ್ಟ ಮಾತೊಗೆ ಬದ್ದವಾಗಿದೆ. ಇದು ಡಿಸೆಂಬರ್ 3 ರಿಂದ ಪ್ರಾರಂಭವಾಗಲಿದ್ದು ಅದಕ್ಕಾಗಿ ತಯಾರಿ ಮತ್ತು ಕ್ವಾರಂಟೈನ್ ಅನ್ನು ಏರ್ಪಡಿಸಲು ಸಾಕಷ್ಟು ಸಮಯ ಬೇಕೆಂದು ಖಚಿತವಾಗಿಸಿಕೊಳ್ಳಲು ಬಿಸಿಸಿಐ ಯೋಜಿಸಿದೆ. ಅದಕ್ಕಾಗಿ ನವೆಂಬರ್ 10 (ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಮುಕ್ತಾಯವಾದ ಎರಡು ದಿನಗಳ ಬಳಿಕ) ಆಸ್ಟ್ರೇಲಿಯಾಗೆ ಟೀಂ ಇಡಿಯಾ ತೆರಳಬೇಕಿದೆ.,
ಸ್ಟಾರ್ ಐಪಿಎಲ್ ಪ್ರಸಾರ ಹಕ್ಕನ್ನು 2018 ರಲ್ಲಿ 16,437 ಕೋಟಿ ರೂ ನೀಡಿ ಪಡೆದುಕೊಂಡಿದೆ. ಇದು ಐದು ವರ್ಷಗಳ ಹಕ್ಕುಗಳ ಮೊತ್ತವಾಗಿದ್ದು ಬಿಸಿಸಿಐಗೆ 3,500 ರಿಂದ 4,000 ಕೋಟಿ ರೂ. ಪ್ರತಿ ವರ್ಷ ಪಾವತಿಸುತ್ತದೆ.