ಕ್ರಿಕೆಟ್

ಭಾರತ ಪ್ರವಾಸದ ಬಳಿಕ ಸ್ವಯಂ ನಿರ್ಬಂಧ ಹೇರಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು!

Vishwanath S

ಜೋಹಾನ್ಸ್ ಬರ್ಗ್: ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಿದ ಆಫ್ರಿಕಾ ಕ್ರಿಕೆಟಿಗರು ಸ್ವಯಂ ನಿಷೇಧ ಘೋಷಿಸಿಕೊಂಡಿದ್ದಾರೆ. 

ಭಾರತದ ಏಕದಿನ ಪ್ರವಾಸದಿಂದ ಮಧ್ಯಕ್ಕೆ ಮರಳಿದ ಆಫ್ರಿಕಾ ಕ್ರಿಕೆಟಿಗರು ಇನ್ನು 14 ದಿನಗಳ ಕಾಲ ಸ್ವಯಂ ನಿರ್ಬಂಧ ಘೋಷಿಸಿಕೊಂಡಿರುವುದಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಮುಖ್ಯ ವೈದ್ಯಾಧಿಕಾರಿ ಡಾ.ಶೂಯಿಬ್ ಮಂಜ್ರಾ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ 60 ದಿನ ಕ್ರಿಕೆಟ್ ನಿಷೇಧ
ಅಪಾಯಕಾರಿ ಕೊರೊನಾ ವೈರಸ್‌ನ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ಮುಂದಿನ 60 ದಿನಗಳವರೆಗೆ ದೇಶದಲ್ಲಿ ಕ್ರಿಕೆಟ್‌ ಕ್ರೀಡೆ ಸ್ಥಗಿತಗೊಳಿಸಿದೆ.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ದೇಶದಲ್ಲಿ ರಾಷ್ಟ್ರೀಯ ವಿಪತ್ತು ಘೋಷಿಸಿದ್ದು, ಇದರ ಅಡಿಯಲ್ಲಿ ಕೊರೊನಾವನ್ನು ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಹಂತಗಳಲ್ಲಿ ಅಪಾಯಕಾರಿ ಪ್ರದೇಶಗಳಿಗೆ ಪ್ರಯಾಣ ನಿಷೇಧಿಸಲಾಗಿದೆ ಮತ್ತು 100 ಕ್ಕೂ ಹೆಚ್ಚು ಜನರ ಕೂಟವನ್ನು ನಿಷೇಧಿಸಲಾಗಿದೆ.

ಇದರೊಂದಿಗೆ, ಪ್ರೀಮಿಯರ್ ಸಾಕರ್ ಲೀಗ್, ಸೂಪರ್ ರಗ್ಬಿ ಮತ್ತು ಎರಡು ಮ್ಯಾರಥಾನ್‌ಗಳನ್ನು ಒಳಗೊಂಡಿರುವ ಕ್ರೀಡಾ ಪಂದ್ಯಾವಳಿಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಫ್ರ್ಯಾಂಚೈಸ್ ಆಧಾರಿತ ಏಕದಿನ ಪಂದ್ಯಾವಳಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಹಾಗೂ ದೇಶಿಯ ಪ್ರಥಮ ದರ್ಜೆ ಸ್ಪರ್ಧೆಯ ಕೊನೆಯ ಎರಡು ಸುತ್ತುಗಳೂ ನಡೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. 

ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾದ ಏಕದಿನ ಸರಣಿಯನ್ನು ಮುಂದೂಡಲಾಗಿತ್ತು.

SCROLL FOR NEXT