ಕ್ರಿಕೆಟ್

ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್ ಗರಂ

Nagaraja AB

ಅಬುಧಾಬಿ: ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ ಬೆನ್ನಲ್ಲೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿಯನ್ನು ಟೀಕಿಸಿದ ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌, ತಂಡದ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.

 ಎಂಎಸ್‌ ಧೋನಿ ಅವರ ಈ ಪ್ರಕ್ರಿಯೆಯನ್ನು ನಾನೆಂದೂ ಸ್ವೀಕರಿಸುವುದಿಲ್ಲ. ಈ ಪ್ರಕ್ರಿಯೆ ಕುರಿತು ಅವರು ಮಾತನಾಡುತ್ತಿರುವುದಕ್ಕೆ ಅರ್ಥವೇ ಇಲ್ಲ. ಪ್ರಕ್ರಿಯೆ..ಪ್ರಕ್ರಿಯೆ ಎಂದು ಸದಾ ಮಾತನಾಡುತ್ತಾರೆ, ಆದರೆ ಅವರ ಆಯ್ಕೆ ಪ್ರಕ್ರಿಯೆಯೇ ತಪ್ಪು  ಎಂದು ಸ್ಟಾರ್‌ಸ್ಪೋರ್ಟ್ಸ್‌ ತಮಿಳು ವಾಹಿನಿಗೆ ಅವರು ತಿಳಿಸಿರುವುದನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ. 

ಸೋಮವಾರ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್  7 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ಮಾತನಾಡಿದ್ದ ಎಂಎಸ್‌ ಧೋನಿ, ಗುಂಪು ಹಂತದ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ, ನಮ್ಮ ಪರ ಫಲಿತಾಂಶ ಮೂಡಿ ಬಂದಿರಲಿಲ್ಲ ಎಂದು  ಹೇಳಿದ್ದರು.

ಪ್ರಸಕ್ತ ಆವೃತ್ತಿಯಲ್ಲಿ ಯುವ ಆಟಗಾರರಾದ ನಾರಾಯಣ ಜಗದೀಶನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರು ಕ್ರಮವಾಗಿ ಒಂದು ಮತ್ತು ಎರಡು ಪಂದ್ಯಗಳಾಡಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಗದೀಶನ್‌ 33 ರನ್‌ಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ ಗಾಯಕ್ವಾಡ್‌, ಎರಡು ಪಂದ್ಯಗಳಿಂದ ಗಳಿಸಿದ್ದು ಕೇವಲ ಐದು ರನ್‌ಗಳು ಮಾತ್ರ.

ಧೋನಿಯ ಒಪ್ಪಂದವೇನು? ಜಗದೀಶನ್‌ಗೆ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಇಲ್ಲ ಎಂದು ಅವರು ಹೇಳುತ್ತಾರೆ, ಆದರೆ 'ಸ್ಕೂಟರ್' ಜಾಧವ್‌ಗೆ ಆ ಸಾಮರ್ಥ್ಯ ಇದೆಯೇ? ಇದು ಹಾಸ್ಯಸ್ಪದವಾಗಿದೆ. ಧೋನಿ ಅವರ ಪ್ರತ್ರಿಯೆಯನ್ನು ಒಪ್ಪಿಕೊಳ್ಳುವುದಿಲ್ಲ, ಆಯ್ಕೆಯೇ ತಪ್ಪಿನಿಂದ ಕೂಡಿದೆ. ಜಾಧವ್ , ಪಿಯೂಷ್ ಚಾವ್ಲಾ ಅವರಂತ ಹಿರಿಯ ಆಟಗಾರರು ಆಡಲಿಲ್ಲ. ಅವರಿಗೆ 15 ಕೋಟಿ ರೂ. ನೀಡಿ ಖರೀದಿಸಿರುವುದೆಲ್ಲಾ ವ್ಯರ್ಥವಾಗಿದೆ ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ.

"ಆಯ್ಕೆ ಪ್ರಕ್ರಿಯೆ ನನಗೆ ಅರ್ಥವಾಗುತ್ತಿಲ್ಲ. ಜಗದೀಶನ್‌ ಅವರಲ್ಲಿ ಯಾವ ಸಾಮರ್ಥ್ಯವನ್ನು ಕಂಡಿದ್ದಾರೆ ? ಕೇದಾರ್‌ ಜಾಧವ್‌ ಹಾಗೂ ಪಿಯೂಷ್‌ ಚಾವ್ಲರಲ್ಲಿ ಅವರು ಯಾವ ಸಾಮರ್ಥ್ಯ ಕಂಡಿದ್ದಾರೆ? ಕರ್ಣ್‌ ಶರ್ಮಾ ಕನಿಷ್ಠ ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಚಾವ್ಲಾ ಪಂದ್ಯ ಮುಗಿದ ಸಮಯದಲ್ಲಿ ಬಂದು ಬೌಲಿಂಗ್‌ ಮಾಡಿ ಹೋಗುತ್ತಾರೆ. ಎಂಎಸ್‌ ಧೋನಿ ಬಿಗ್‌ ಶಾಟ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರು ಶ್ರೇಷ್ಠ ನಾಯಕ, ಆದರೆ, ಆಯ್ಕೆ ಪ್ರಕ್ರಿಯೆ ವಿಷಯ ಬಂದಾಗ ಇದನ್ನು ಒಪ್ಪಲು ಸಾಧ್ಯವಿಲ್ಲ," ಎಂದು ಶ್ರೀಕಾಂತ್‌ ತಿಳಿಸಿದರು. 

SCROLL FOR NEXT