ಕ್ರಿಕೆಟ್

ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸದಾಶಿವ್ ಪಾಟೀಲ್ ನಿಧನ

Vishwanath S

ನವದೆಹಲಿ: ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್ ಸದಾಶಿವ್ ಪಾಟೀಲ್(86) ಅವರು ಕೊಲ್ಹಾಪುರದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.

ವೇಗದ ಬೌಲಿಂಗ್ ಆಲ್‌ರೌಂಡರ್ ಸದಾಶಿವ್ ಅವರು 1955ರ ಡಿಸೆಂಬರ್‌ನಲ್ಲಿ ಬಾಂಬೆಯಲ್ಲಿ(ಈಗಿನ ಮುಂಬೈ) ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಏಕೈಕ ಟೆಸ್ಟ್ ಆಡಿದರು. ಇದರಲ್ಲಿ ಅವರು ಒಟ್ಟು 51 ರನ್‌ಗಳಿಗೆ ಎರಡು ವಿಕೆಟ್ ಪಡೆದರು ಮತ್ತು 14 ರನ್ ಬಾರಿಸಿದರು. ಇದರ ನಂತರ ಅವರು ಮತ್ತೆ ಭಾರತ ಪರ ಆಡಲಿಲ್ಲ.

ರಣಜಿಯಲ್ಲಿ ಮಹಾರಾಷ್ಟ್ರ ಪರ ಆಡಿರುವ ಸದಾಶಿವ್ 83 ವಿಕೆಟ್ ಪಡೆದಿದ್ದಾರೆ. 1952-1964ರವರೆಗೆ 36 ಪ್ರಥಮ ದರ್ಜೆ ಪಂದ್ಯಗಳಲ್ಲಿ 866 ರನ್ ಸಿಡಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 38 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದಾರೆ.

ಏಕೈಕ ಟೆಸ್ಟ್ ನಲ್ಲಿ ಅವರ ಸಾಧನೆ ಯೋಗ್ಯವಾಗಿತ್ತು ಆದರೆ ಅವರಿಗೆ ಮತ್ತೆ ಅವಕಾಶ ಸಿಗಲಿಲ್ಲ. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಔಟಾಗದೆ 14 ರನ್ ಗಳಿಸಿದರು ಮತ್ತು ಎರಡೂ ಇನ್ನಿಂಗ್ಸ್‌ಗಳಲ್ಲಿ ಜಾನ್ ರೀಡ್ ಅವರ ವಿಕೆಟ್ ಪಡೆದರು. 51 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿದ ಅವರು ಪಂದ್ಯದಲ್ಲಿ ಒಟ್ಟು 23 ಓವರ್‌ಗಳನ್ನು ಎಸೆದಿದ್ದರು. ಭಾರತ ಪಂದ್ಯವನ್ನು ಇನ್ನಿಂಗ್ಸ್ ಮತ್ತು 27 ರನ್‌ಗಳಿಂದ ಗೆದ್ದುಕೊಂಡಿತು.

SCROLL FOR NEXT