ಕ್ರಿಕೆಟ್

ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್'ರ ಆ ಎರಡು ಟ್ವೀಟ್ ಗೆ ನೆಟ್ಟಿಗರು ಕ್ಲೀನ್ ಬೌಲ್ಡ್! 

Srinivas Rao BV

ಬೆಂಗಳೂರು: ಆನ್ ಫೀಲ್ಡ್ ನಲ್ಲಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರ ಬೌಲಿಂಗ್ ವೈಖರಿಗೆ ಮನಸೋತಿದ್ದ ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ಟ್ವೀಟ್ ಗಳನ್ನು ಆಸ್ವಾದಿಸುತ್ತಿದ್ದಾರೆ. 

ಇತ್ತೀಚೆಗಷ್ಟೇ ಟ್ವೀಟರ್ ನಲ್ಲಿ ಅಧಿಕೃತ ಖಾತೆ ತೆರೆದಿದ್ದ ವೆಂಕಟೇಶ್ ಪ್ರಸಾದ್, ನಿರ್ವಿಘ್ನವಾಗಿ ಸಾಮಾಜಿಕ ಜಾಲತಾಣದ ಪ್ರಯಾಣ ಪ್ರಾರಂಭವಾಗಲಿ ಎಂಬ ಆಶಯದೊಂದಿಗೆ ಸಂಸ್ಕೃತದ ಶ್ಲೋಕವನ್ನು ಬರೆದಿದ್ದರು. 

ಇದಕ್ಕೆ ವ್ಯಕ್ತಿಯೊಬ್ಬರು ಕಾಮೆಂಟಿಸಿ, "ಸರ್ ನೀವು ಕನ್ನಡಿಗರಾಗಿದ್ದುಕೊಂಡು ಹಿಂದಿಯಲ್ಲಿ ಹೇಗೆ ಟ್ವೀಟ್ ಮಾಡಲು ಸಾಧ್ಯ" ಎಂದು ಪ್ರಶ್ನಿಸಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವೆಂಕಟೇಶ್ ಪ್ರಸಾದ್, ಕೀ ಬೋರ್ಡ್ ಉಪಯೋಗಿಸಿಕೊಂಡು ಹಿಂದಿಯಲ್ಲಿ ಟ್ವೀಟ್ ಮಾಡಿದೆ ಸರ್ ಎಂದು ಲಘುವಾಗಿ ಟ್ವೀಟ್ ಮಾಡಿದ್ದಾರೆ. 

"ಎಲ್ಲರಂತೆ ನಾನೂ ಹೆಮ್ಮೆಯ ಭಾರತೀಯ ಹಾಗೂ ಕನ್ನಡಿಗ. ನಾನು ಬರೆದಿದ್ದು ಶುಭಾರಂಭಕ್ಕಾಗಿ ಇರುವ ಸಂಸ್ಕೃತ ಶ್ಲೋಕವನ್ನು, ನಮ್ಮ ಶ್ರೇಷ್ಠ ಭಾರತದ ವಿವಿಧ ಸಂಸ್ಕೃತಿಗಳನ್ನು ಸ್ವೀಕರಿಸಿ ಆಸ್ವಾದಿಸುವುದಕ್ಕೆ ನಿಮಗೂ ಶುಭಾರಂಭವನ್ನು ಕೋರುತ್ತೇನೆ" ಎಂದು ತಪರಾಕಿ ನೀಡಿದ್ದಾರೆ. 

ಇದಕ್ಕೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದು, ಕನ್ನಡದ ಲಿಪಿಯಲ್ಲೇ ಸಂಸ್ಕೃತ ಶ್ಲೋಕವನ್ನು ಬರೆಯಬಹುದಿತ್ತಲ್ಲಾ, ಹಿಂದಿಯ ಲಿಪಿಯೇ ಬೇಕಾಯಿತೇ? ಎಂಬ ಮರುಪ್ರಶ್ನೆಯನ್ನೂ ಹಾಕಿದ್ದಾರೆ. ಈ ಟ್ವೀಟ್ ವೈರಲ್ ಆಗತೊಡಗಿದೆ. 

ಇನ್ನು ಇತ್ತೀಚೆಗಷ್ಟೇ ವೈರಲ್ ಆಗತೊಡಗಿದ್ದ ರಾಹುಲ್ ದ್ರಾವಿಡ್ ಅವರು ನಟಿಸಿದ್ದ ಜಾಹಿರಾತಿನಲ್ಲಿ ಬರುವ ಇಂದಿರಾನಗರದ ಗೂಂಡಾ ನಾನು ಎಂಬ ಡೈಲಾಗ್ ನ್ನು  ಬಳಸಿಕೊಂಡೂ ವೆಂಕಟೇಶ್ ಪ್ರಸಾದ್ ಕ್ರಿಕೆಟಿಗ ಆಮೀರ್ ಸೊಹೈಲ್ ಕಾಲೆಳೆದಿದ್ದಾರೆ. 

1996 ರ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ- ಪಾಕ್ ಸೆಣೆಸಿದ್ದವು.  ಈ ಪಂದ್ಯದ 15 ನೇ ಓವರ್ ಬೌಲಿಂಗ್ ಮಾಡಿದ್ದ ವೆಂಕಟೇಶ್ ಪ್ರಸಾದ್ ಗೆ ಐದನೆ ಎಸೆತದಲ್ಲಿ ಬೌಂಡರಿ ಬಾರಿಸಿದ್ದ ಆಮಿರ್ ಸೊಹೈಲ್ ಮುಂದಿನ ಎಸೆತವನ್ನೂ ಬೌಂಡರಿಗೆ ಅಟ್ಟುವೆ ಎಂಬ ಎಚ್ಚರಿಕೆ ನೀಡಿದ್ದರು. ಆದರೆ ವೆಂಕಟೇಶ್ ಪ್ರಸಾದ್ ಅವರ 15 ನೇ ಓವರ್ ನ ಕೊನೆಯ ಎಸೆತದಲ್ಲಿ ಆಮಿರ್ ಸೊಹೈಲ್ ಕ್ಲೀನ್ ಬೌಲ್ಡ್ ಆದರು. ಎಚ್ಚರಿಕೆ ನೀಡಿದ್ದ ಸೊಹೈಲ್ ಪೆವಿಲಿಯನ್ ಗೆ ತೆರಳಿದರು. ಈ ಘಟನೆಯ ಚಿತ್ರಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವೆಂಕಟೇಶ್ ಪ್ರಸಾದ್ ಇಂದಿರಾನಗರದ ಗೂಂಡಾ ನಾನು ಎಂದು ಬರೆದುಕೊಂಡಿದ್ದಾರೆ. ಈ ಎರಡೂ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. 

SCROLL FOR NEXT