ಕ್ರಿಕೆಟ್

ಬಿಸಿಸಿಐ ನನಗೆ ಬೆದರಿಕೆ ಹಾಕುತ್ತಿದೆ: ಮಾಜಿ ಕ್ರಿಕೆಟರ್‌ ಹರ್ಷಲ್‌ ಗಿಬ್ಸ್‌ ಆರೋಪ

Lingaraj Badiger

ನವದೆಹಲಿ: ದಕ್ಷಿಣ ಆಫ್ರಿಕಾ ಮಾಜಿ ಸ್ಟಾರ್ ಕ್ರಿಕೆಟರ್ ಹರ್ಷಲ್ ಗಿಬ್ಸ್ ಬಿಸಿಸಿಐ ತಮಗೆ ಬೆದರಿಕೆ ಹಾಕುತ್ತಿದೆ ಎಂದು ಟ್ವೀಟರ್‌ ನಲ್ಲಿ ಆರೋಪಿಸಿದ್ದಾರೆ. 

ಪಾಕಿಸ್ತಾನದಲ್ಲಿ ನಡೆಯಲಿರುವ ಕಾಶ್ಮೀರ್‌ ಪ್ರೀಮಿಯರ್ ಲೀಗ್(ಕೆಪಿಎಲ್‌  2021)ನಲ್ಲಿ  ಪಾಲ್ಗೊಳ್ಳಲು ಅವಕಾಶವಿಲ್ಲ.. ಒಂದು ವೇಳೆ  ಟೂರ್ನಿಯಲ್ಲಿ ಪಾಲ್ಗೊಂಡರೆ  ಭವಿಷ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್‌ ಟೂರ್ನಿಗಳು ಸೇರಿ ಕ್ರೀಡಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು  ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ ಎಂದು ತಿಳಿಸಿದ್ದಾರೆ.

ಆದರೆ, ಗಿಬ್ಸ್ ಆರೋಪಗಳಿಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ತಿಂಗಳ 6ರಿಂದ ಕೆಪಿಎಲ್ 2021 ಸೀಸನ್  ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಗಿಬ್ಸ್ ಜೊತೆಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ಸೇರಿದಂತೆ ಹಲವು ಕ್ರಿಕೆಟಿಗರು   ಕೂಡ ಆಡಲಿದ್ದಾರೆ. ಆದರೆ ಗಿಬ್ಸ್ ಟ್ವಿಟರ್ ಮೂಲಕ ಬಿಸಿಸಿಐ ವಿರುದ್ದ   ಆರೋಪಿಸಿದ್ದಾರೆ.

ಕಾಶ್ಮೀರ ಪ್ರೀಮಿಯರ್ ಲೀಗ್(ಕೆಪಿಎಲ್) ಅನ್ನು ಬಿಸಿಸಿಐ ರಾಜಕೀಯ ವಿಷಯಗಳೊಂದಿಗೆ ಲಿಂಕ್ ಮಾಡುತ್ತಿದೆ. ನಾನು ಕೆಪಿಎಲ್‌ನಲ್ಲಿ ಆಡುವುದನ್ನು ಬಿಸಿಸಿಐ ತಡೆಯುತ್ತಿದೆ. ಒಂದು ವೇಳೆ ನಾನು ಲೀಗ್‌ನಲ್ಲಿ ಭಾಗವಹಿಸಿದರೆ ಭವಿಷ್ಯದಲ್ಲಿ ಭಾರತದಲ್ಲಿ ಯಾವುದೇ ಕ್ರೀಡಾಕೂಟಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಆದರೆ ಬಿಸಿಸಿಐನ ಈ ಆಕ್ಷೇಪ ತಮಗೆ ಇಷ್ಟವಾಗಿಲ್ಲ. ಈ ವಿಚಾರ   ತುಂಬಾ ನೋವುಂಟು ಮಾಡಿದೆ "ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಕೂಡ ಇದೇ ವಿಷಯದ ಕುರಿತು  ಬಿಸಿಸಿಐ ನಿಲುವಿಗೆ ಆಕ್ಷೇಪಿಸಿ ಟ್ವೀಟ್ ಮಾಡಿದ್ದಾರೆ. ಆಗಸ್ಟ್‌  6 ರಿಂದ ಆರಂಭಗೊಳ್ಳಲಿರುವ ಕೆಪಿಎಲ್‌ ಟೂರ್ನಿಯಲ್ಲಿ ಓವರ್‌ ಸೀಸ್‌ ವಾರಿಯರ್ಸ್, ಮುಜಾಫರಾಬಾದ್ ಟೈಗರ್ಸ್, ರಾವಲ್ಪಿಂಡಿ ಹಾಕ್ಸ್, ಬಾಗ್ ಸ್ಟಾಲಿಯನ್ಸ್, ಮಿರ್ಪುರ್ ರಾಯಲ್ಸ್ ಹಾಗೂ ಕೊಟ್ಲಿ ಲಯನ್ಸ್ ತಂಡಗಳು ಆಡಲಿವೆ. ಇಮಾದ್ ವಸೀಮ್, ಮೊಹಮ್ಮದ್ ಹಫೀಜ್, ಶಾಹಿದ್ ಅಫ್ರಿದಿ, ಶಾಬಾದ್ ಖಾನ್, ಶೋಯೆಬ್ ಮಲಿಕ್ ಮತ್ತು ಕಮ್ರಾನ್ ಅಕ್ಮಲ್ ಈ ಆರು ತಂಡಗಳ ನಾಯಕತ್ವ ವಹಿಸಲಿದ್ದಾರೆ.

SCROLL FOR NEXT