ಕ್ರಿಕೆಟ್

ಟೀಂ ಇಂಡಿಯಾದ ನೂತನ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದೇನು?

Vishwanath S

ಭಾರತದ ಉಪನಾಯಕ ರೋಹಿತ್ ಶರ್ಮಾ ಬುಧವಾರ ರಾಹುಲ್ ದ್ರಾವಿಡ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದನ್ನು ಸ್ವಾಗತಿಸಿದ್ದು, ದಿಗ್ಗಜ ಬ್ಯಾಟ್ಸ್‌ಮನ್‌ನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಬಳಿಕ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಫ್ಗಾನ್ ವಿರುದ್ಧದ ಪಂದ್ಯವನ್ನು ಆಡುತ್ತಿದ್ದೆವು. ರಾಹುಲ್ ದ್ರಾವಿಡ್ ಅವರು ಕೋಚ್ ನೇಮಕ ವಿಚಾರ ನಮಗೆ ತಿಳಿದಿರಲಿಲ್ಲ. ವಿಭಿನ್ನ ಸಾಮರ್ಥ್ಯದೊಂದಿಗೆ ಮರಳಿ ಭಾರತ ತಂಡಕ್ಕೆ ಬಂದಿದ್ದಕ್ಕಾಗಿ ರಾಹುಲ್ ದ್ರಾವಿಡ್ ಅವರಿಗೆ ಅಭಿನಂದನೆಗಳು, ನಾವು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಭಾರತೀಯ ಕ್ರಿಕೆಟ್‌ನ ದಂತಕಥೆ ಮತ್ತು ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡುವುದು ಉತ್ತಮವಾಗಿರಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಟೀಂ ಇಂಡಿಯಾದ ನೂತನ ಕೋಚ್ ಆಗಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ನೇಮಕ ಮಾಡಿರುವುದಾಗಿ ನಿನ್ನೆ ಬಿಸಿಸಿಐ ಘೋಷಿಸಿತ್ತು. 2021ರ ಟಿ20 ವಿಶ್ವಕಪ್ ನಂತರ, ನ್ಯೂಜಿಲೆಂಡ್ ತಂಡವು ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸಕೈಗೊಳ್ಳಲಿದೆ. ನವೆಂಬರ್ 17ರಂದು ಮೊದಲ ಟಿ20 ಪಂದ್ಯದೊಂದಿಗೆ ಪ್ರವಾಸ ಆರಂಭವಾಗಲಿದೆ. ಈ ಸರಣಿಯಿಂದಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ದ್ರಾವಿಡ್ 2023ರ ವಿಶ್ವಕಪ್ ವರೆಗೆ ಕೋಚ್ ಆಗಿ ಇರಲಿದ್ದಾರೆ
ದ್ರಾವಿಡ್ ಅವರನ್ನು 2023ರಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ವರೆಗೆ ಎರಡು ವರ್ಷಗಳ ಕಾಲ ಈ ಹುದ್ದೆಗೆ ನೇಮಿಸಲಾಗಿದೆ. ದ್ರಾವಿಡ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಮೊದಲ ಆಯ್ಕೆಯಾಗಿದ್ದು, ಅವರು ದುಬೈನಲ್ಲಿ ಅವರೊಂದಿಗೆ ಮಾತನಾಡಿ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಮನವೊಲಿಸಿದರು. ದ್ರಾವಿಡ್ ಅರ್ಜಿ ಸಲ್ಲಿಸಿದ ಬಳಿಕ ಬಿಸಿಸಿಐ ಬೇರೆ ಯಾವುದೇ ಅರ್ಜಿಯನ್ನು ಪರಿಶೀಲಿಸುವ ಅಗತ್ಯವಿರಲಿಲ್ಲ.

SCROLL FOR NEXT