ಕ್ರಿಕೆಟ್

ಅಶ್ಲೀಲ ಮೆಸೇಜ್ ಪ್ರಕರಣ: ಆಸಿಸ್ ನಾಯಕನ ತಲೆದಂಡ; ಟೆಸ್ಟ್ ತಂಡದ ನಾಯಕತ್ವ ತೊರೆದ 'ಟಿಮ್ ಪೈನ್'

Srinivasamurthy VN

ಮೆಲ್ಬೋರ್ನ್: ಸಹೋದ್ಯೋಗಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನ ತಲೆದಂಡವಾಗಿದ್ದು, ಟಿಮ್ ಪೈನ್ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಹೌದು.. ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡವನ್ನು ಕಳೆದ ನಾಲ್ಕು ವರ್ಷಗಳಿಂದ ಮುನ್ನಡೆಸುತ್ತಿದ್ದ ಟಿಮ್ ಪೈನ್ ಅತ್ಯಂತ ಕೆಟ್ಟ ರೀತಿಯಲ್ಲಿ ನಾಯಕತ್ವವನ್ನು ತ್ಯಜಿಸಿದ್ದು, ಮೈದಾನದಾಚೆಯ ವಿವಾದವೊಂದಕ್ಕೆ ಸಿಲುಕಿರುವ ಆಸಿಸ್ ನಾಯಕ ಟಿಮ್ ಪೈನ್ ದೊಡ್ಡ ಸರಣಿ(ಆ್ಯಶಸ್) ಯೊಂದು ಸನಿಹದಲ್ಲಿರುವಾಗಲೇ ನಾಯಕತ್ವ ತ್ಯಜಿಸಿದ್ದಾರೆ. ಇದು ಟಿ20 ಚಾಂಪಿಯನ್ ಪಟ್ಟಕ್ಕೇರಿರುವ ಆಸ್ಟ್ರೇಲಿಯಾ ತಂಡಕ್ಕೆ ಹಾಗೂ ಅದರ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.

ಶುಕ್ರವಾರ ಆಸ್ಟ್ರೇಲಿಯಾದ ಹೋಬಾರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಟಿಮ್ ಪೈನ್ ತಮ್ಮ ರಾಜಿನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.  ಸ್ಟೀವ್ ಸ್ಮಿತ್ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾದಾಗ ಟಿಮ್ ಆಸ್ಟ್ರೇಲಿಯಾ ತಂಡದ ನಾಯಕರಾಗಿ ನೇಮಕವಾಗಿದ್ದರು.

ಏನಿದು ಪ್ರಕರಣ?
2017ರಲ್ಲಿ ಕ್ರಿಕೆಟ್ ಟಾಸ್ಮೇನಿಯಾದ ಉದ್ಯೋಗಿ ಜೊತೆಗಿನ ಈ ಪ್ರಕರಣ ಬಹಿರಂಗವಾಗಿತ್ತು. ಸಹೋದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಪೈನ್ ವಿರುದ್ಧ ತನಿಖೆಯನ್ನು ನಡೆಸುತ್ತಿದೆ. ಇದೇ ವಿಚಾರವಾಗಿ ಆಸಿಸ್ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಬಿತ್ತಾರವಾಗುತ್ತಿದ್ದು, ಹೀಗಾಗಿ ಟಿಮ್ ಪೈನ್ ಈ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 

ಕ್ಷಮೆ ಕೋರಿದ ಪೈನ್
'ಇದು ಅಭಿಮಾನಿಗಳಿಗೆ ನಂಬಲಾಗದಷ್ಟು ಕಷ್ಟಕರವಾದ ನಿರ್ಧಾರವಾಗಿದೆ.. ಆದರೆ ನನಗೆ, ನನ್ನ ಕುಟುಂಬ ಮತ್ತು ಕ್ರಿಕೆಟ್‌ಗೆ ಸರಿಯಾದ ನಿರ್ಧಾರವಾಗಿದೆ. ವಿವಾದ ಮುಕ್ತಾಯಗೊಂಡಿದ್ದರೂ ನಾನು ಘಟನೆ ತೀವ್ರ ವಿಷಾದಿಸುತ್ತೇನೆ. ನಾನು ನನ್ನ ಹೆಂಡತಿ ಮತ್ತು ಕುಟುಂಬದೊಂದಿಗೆ ಮಾತನಾಡಿದ್ದು, ಅವರ ಕ್ಷಮೆ ಮತ್ತು ಬೆಂಬಲಕ್ಕಾಗಿ ಅಪಾರವಾಗಿ ಕೃತಜ್ಞನಾಗಿದ್ದೇನೆ ಎಂದು ಪೈನ್ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಹೇಳಿದ್ದಾರೆ.

ಆ್ಯಶಸ್ ಬೆನ್ನಲ್ಲೇ ಆಸಿಸ್ ತಂಡಕ್ಕೆ ದೊಡ್ಡ ಆಘಾತ
ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಗೆ ಮೂರು ವಾರಗಳಿಗೂ ಕಡಿಮೆ ದಿನಗಳಿರುವಾಗ ಈ ಬೆಳವಣಿಗೆ ನಡೆದಿರುವುದು ಆಸಿಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಪ್ಯಾಟ್ ಕಮ್ಮಿನ್ಸ್ ಗೆ ನಾಯಕತ್ವ ಜವಾಬ್ದಾರಿ, 65 ವರ್ಷಗಳ ಬಳಿಕ ವೇಗಿಯ ಕೈಗೆ ಆಸಿಸ್ ನಾಯಕತ್ವ!
ಪೇಯ್ಮ್ ರಾಜಿನಾಮೆಯಿಂದಾಗಿ ಸದ್ಯ ಉಪನಾಯಕನಾಗಿರುವ ಪ್ಯಾಟ್ ಕಮಿನ್ಸ್ ಆ್ಯಶಸ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಒಂದು ವೇಳೆ ಕಮಿನ್ಸ್ ಕೈಗೆ ನಾಯಕತ್ವ ನೀಡಿದ್ದೇ ಆದರೆ 65 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವನ್ನು ವೇಗದ ಬೌಲರ್ ಒಬ್ಬರು ತಂಡವನ್ನು ಮುನ್ನಡೆಸಿದಂತಾಗುತ್ತದೆ. ಆಸಿಸ್ ನಾಯಕತ್ವ ಪ್ಯಾಟ್ ಕಮ್ಮಿನ್ಸ್ ಹೆಗಲೇರಿದರೆ ತಂಡವನ್ನು ನಾಯಕನಾಗಿ ಮುನ್ನಡೆಸುವ 47ನೇ ಆಟಗಾರ ಎನಿಸಲಿದ್ದಾರೆ.

SCROLL FOR NEXT