ಕ್ರಿಕೆಟ್

ಹಲಾಲ್ ಮೆನು ವಿವಾದ: ಆಟಗಾರರು ತಮ್ಮ ಇಚ್ಚೆಯ ಆಹಾರ ಸೇವಿಸಲು ಸ್ವಾತಂತ್ರ್ಯವಿದೆ- ಬಿಸಿಸಿಐ ಸ್ಪಷ್ಟನೆ

Nagaraja AB

ಕಾನ್ಪುರ: ಕಾನ್ಪುರದಲ್ಲಿ ನಾಳೆಯಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜುಗೊಳ್ಳುತ್ತಿದೆ. ಈ ಕ್ರಮವಾಗಿ  ಟೀಮ್ ಇಂಡಿಯಾ ಆಟಗಾರರ ಆಹಾರ ಮೆನುವಿನಲ್ಲಿ ಬದಲಾವಣೆ ಮಾಡಿ, ಹೊಸ ಡಯಟ್ ನಿಯಮಗಳನ್ನು ಬಿಸಿಸಿಐ ಜಾರಿಗೊಳಿಸಿದೆ ಎಂಬ ವಿಷಯ ಸೋಷಿಯಲ್ ಮೀಡಿಯಾದಲ್ಲಿ  ಹಲ್ ಚಲ್  ಸೃಷ್ಟಿಸಿದೆ.

ಹಂದಿ, ದನದ ಮಾಂಸ ನಿಷೇಧಿಸಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಡಿವೆ. ಅಷ್ಟು ಮಾತ್ರವಲ್ಲದೆ ಕೇವಲ ಹಲಾಲ್ ಮಾಡಿದ ಮಾಂಸವನ್ನು ಮಾತ್ರ  ಸೇವಿಸಬೇಕು ಎಂಬ ನಿಯಮ ಡಯಟ್ ರೂಲ್ಸ್ ನಲ್ಲಿ ಸೇರಿಸಲಾಗಿದೆ ಎಂಬ ಸುದ್ದಿಗಳು ಹರಡಿವೆ.

ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ಮಂಡಳಿಯ ವಿರುದ್ದ ಅಕ್ರೋಶ ವ್ಯಕ್ತವಾಗಿದೆ. ವಿವಾದದ ಬಗ್ಗೆ ಬಿಸಿಸಿಐ ಕೋಶಾಧಿಕಾರಿ ಅರುಣ್ ಧುಮಾಲ್ ಪ್ರತಿಕ್ರಿಯಿಸಿದ್ದು, ಹಲಾಲ್ ಮಾಂಸ ಡಯಟ್ ಯೋಜನೆ ಕುರಿತು ಹರಡಿರುವ ಸುದ್ದಿಗಳನ್ನು ಖಂಡಿಸಿದ್ದಾರೆ. ಆಟಗಾರರು ಇಲ್ಲವೆ, ಸಿಬ್ಬಂದಿಗೆ ಬಿಸಿಸಿಐ ಯಾವುದೇ ಆದೇಶ ಜಾರಿಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ಆಟಗಾರರು ತಮ್ಮ ಇಚ್ಚೆಯ ಆಹಾರ ಸೇವಿಸಲು ಸ್ವಾತಂತ್ರ್ಯ ಕಲ್ಪಿಸಿರುವುದಾಗಿ ಧುಮಾಲ್ ತಿಳಿಸಿದ್ದಾರೆ.

ಆಟಗಾರರು ಇಲ್ಲವೆ ತಂಡದ ಸಿಬ್ಬಂದಿ ಯಾವ ಆಹಾರ ಸೇವಿಸಬೇಕು, ಸೇವಿಸಬಾರದು ಎಂಬ ಬಗ್ಗೆ ಬಿಸಿಸಿಐ ಯಾವುದೇ ಆದೇಶ ನೀಡಿಲ್ಲ. ಈ ಸುದ್ದಿಗಳು ನಿರಾಧಾರ. ಡಯಟ್ ಯೋಜನೆಯ ಬಗ್ಗೆ ಬಿಸಿಸಿಐ ಎಂದೂ ಕೂಡ ಚರ್ಚೆ ನಡೆಸಿಲ್ಲ. ಆಟಗಾರರರು ತಮಗೆ ಇಷ್ಟವಾದ ಆಹಾರ ತಿನ್ನಬಹುದು ಎಂದು ಹೇಳಿದ್ದಾರೆ.

SCROLL FOR NEXT