ಫೈನಲ್ ಪ್ರವೇಶಿಸಿದ ಸಂಭ್ರಮದಲ್ಲಿ ಭಾರತ ವನಿತೆಯರ ತಂಡ 
ಕ್ರಿಕೆಟ್

ಕಾಮನ್ ವೆಲ್ತ್ ಗೇಮ್ಸ್: ಅಬ್ಬರಿಸಿದ ಮಂದಾನ, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ, ಐತಿಹಾಸಿಕ ಫೈನಲ್ ಪ್ರವೇಶ

ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆಗೈದಿದ್ದು, ಬಲಾಢ್ಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆಗೈದಿದ್ದು, ಬಲಾಢ್ಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದಲ್ಲಿ ಭಾರತ ವನಿತೆಯರ ತಂಡ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರನ್ನು 4 ರನ್ ಗಳ ಅಂತರದಲ್ಲಿ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಭಾರತ ನೀಡಿದ 165 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳನ್ನು ಮಾತ್ರ ಕಲೆಹಾಕಿತು. ಆ ಮೂಲಕ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ. ಟೀಮ್ ಇಂಡಿಯಾ ನೀಡಿದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಸೋಫಿಯಾ ಡಂಕ್ಲಿ 19, ಡೇನಿಯಲ್ ವ್ಯಾಟ್ 35, ಆಲಿಸ್ ಕ್ಯಾಪ್ಸಿ 13, ನಾಯಕಿ ನಟಾಲಿ ಸ್ಕೀವರ್ 41, ಆ್ಯಮಿ ಜೋನ್ಸ್ 31, ಕ್ಯಾಥರಿನ್ ಬ್ರಂಟ್ ಡಕ್ ಔಟ್, ಮಿಯಾ ಬೌಷರ್ ಅಜೇಯ 4 ಮತ್ತು ಸೋಫಿ ಎಕ್ಸ್ಲೆಸ್ಟೋನ್ ಅಜೇಯ 7 ರನ್ ಕಲೆ ಹಾಕಿದರು. ಭಾರತದ ಪರ ಸ್ನೇಹ್ ರಾಣಾ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.

ಈ ಮೂಲಕ ಭಾರತ 4 ರನ್‌ಗಳ ರೋಚಕ ಜಯ ಸಾಧಿಸಿದ್ದು ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಚೊಚ್ಚಲ ಕ್ರಿಕೆಟ್ ಆವೃತ್ತಿಯಲ್ಲಿಯೇ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ.

ಸ್ಮೃತಿ ಮಂದಾನ ಅಬ್ಬರದ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿಯರಾಗಿ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಕಣಕ್ಕಿಳಿದರು. ಈ ಪೈಕಿ ಶೆಫಾಲಿ ವರ್ಮಾ 15 ರನ್ ಕಲೆಹಾಕಿ ಔಟಾದರೆ, ಸ್ಮೃತಿ ಮಂದಾನ 32 ಎಸೆತಗಳಲ್ಲಿ ಬರೋಬ್ಬರಿ 61 ರನ್ ಚಚ್ಚುವುದರ ಮೂಲಕ ಅಕ್ಷರಶಃ ಅಬ್ಬರಿಸಿದರು. 8 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ ಸ್ಮೃತಿ ಮಂದಾನ 190.62 ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟ್ ಬೀಸಿದರು. ಸ್ಮೃತಿ ಮಂಧಾನ ಔಟ್ ಆದ ಬಳಿಕ ಟೀಮ್ ಇಂಡಿಯಾದ ರನ್ ವೇಗ ತಗ್ಗಿತು. ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 20 ಎಸೆತಗಳಲ್ಲಿ 20 ರನ್ ಕಲೆಹಾಕಿದರೆ, ದೀಪ್ತಿ ಶರ್ಮಾ 20 ಎಸೆತಗಳಲ್ಲಿ 22 ರನ್ ಬಾರಿಸಿದರು, ಪೂಜಾ ವಸ್ತ್ರಾಕರ್ ಡೈಮಂಡ್ ಡಕ್ ಔಟ್ ಆದರು ಹಾಗೂ ಜೆಮಿಮಾ ರೊಡ್ರಿಗಸ್ ಅಜೇಯ 44 ರನ್ ಮತ್ತು ಸ್ನೇಹ್ ರಾಣಾ ಯಾವುದೇ ರನ್ ಕಲೆಹಾಕದೇ ಅಜೇಯರಾಗಿ ಉಳಿದರು.

ಭಾರತಕ್ಕೆ ಮತ್ತೊಂದು ಪದಕ ಖಚಿತ
ಇನ್ನು ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿರುವ ಭಾರತ ವನಿತೆಯರ ತಂಡ ನಾಳೆ ( ಆಗಸ್ಟ್ 7 ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಸೆಮಿಫೈನಲ್ ಗೆದ್ದು ಬರುವ ತಂಡದ ಜತೆ ಸೆಣಸಾಟ ನಡೆಸಲಿದೆ. ಹೀಗೆ ಫೈನಲ್ ಪ್ರವೇಶ ಮಾಡಿ ಐತಿಹಾಸಿಕ ಸಾಧನೆ ಮಾಡಿರುವ ಭಾರತ ವನಿತೆಯರು ಫೈನಲ್ ಪಂದ್ಯದಲ್ಲಿ ಗೆದ್ದರೆ ಚಿನ್ನ ಅಥವಾ ಸೋತರೆ ಬೆಳ್ಳಿ ಪದಕವನ್ನು ಗೆಲ್ಲಲಿದ್ದಾರೆ. 

ಐತಿಹಾಸಿಕ ಸಾಧನೆ
ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದ್ದು, ಭಾರತ ಕ್ರಿಕೆಟ್ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಯೋಜನೆಯಾದ ಮೊದಲನೇ ಆವೃತ್ತಿಯಲ್ಲಿಯೇ ಪದಕ ಪಡೆದ ಐತಿಹಾಸಿಕ ದಾಖಲೆ ಬರೆಯಲಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್​ಗೆ 61 ರನ್ ಗಳ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT