ಕ್ರಿಕೆಟ್

ಮೊದಲ ಟೆಸ್ಟ್: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 188ರನ್ ಗಳ ಭರ್ಜರಿ ಜಯ, ಸರಣಿಯಲ್ಲಿ 1-0 ಮುನ್ನಡೆ

Srinivasamurthy VN

ಚತ್ತೊಗ್ರಾಮ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ 188 ರನ್‌ಗಳಿಂದ ಭರ್ಜರಿಯಾಗಿ ಗೆದ್ದಿದ್ದು, ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.

ಚತ್ತೊಗ್ರಾಮ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ನೀಡಿದ 513 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 324 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ ಭಾರತ 188 ರನ್‌ಗಳಿಂದ ಪಂದ್ಯ ಗೆದ್ದಿದ್ದು, ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.

ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 133.05 ಓವರ್‌ಗಳಲ್ಲಿ 404 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾ ತಂಡ 55.5 ಓವರ್‌ಗಳಲ್ಲಿ ಕೇವಲ 150 ರನ್‌ ಗಳಿಸಿ ಸರ್ವ ಪತನ ಕಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 61.4 ಓವರ್‌ ಆಡಿ ಎರಡು ವಿಕೆಟ್‌ ನಷ್ಟದೊಂದಿಗೆ 258 ರನ್‌ ಗಳಿಸಿದ್ದ ಭಾರತ ಇನ್ನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡು, ಬಾಂಗ್ಲಾ ತಂಡಕ್ಕೆ 513 ರನ್‌ಗಳ ಗುರಿ ನೀಡಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ 90 ರನ್‌ ಗಳಿಸಿದ ಪೂಜಾರ ಮಿಂಚಿದ್ದರು. ಬೌಲಿಂಗ್‌ನಲ್ಲಿ ಕುಲದೀಪ್‌ ಯಾದವ್‌ 5 ವಿಕೆಟ್‌ ಗಳಿಸಿ ಗಮನ ಸೆಳೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌ 110, ಚೇತೇಶ್ವರ ಪೂಜಾರ 102 ರನ್‌ ಸಿಡಿಸಿದ್ದು ಪಂದ್ಯದ ಮತ್ತೊಂದು ವಿಶೇಷವಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಬ್ಯಾಟರ್‌ ಜಾಕಿರ್‌ ಹುಸೇನ್‌ 100 ಗಳಿಸಿ ಗಮನಾರ್ಹ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಪ್ರಭಾವಿ ಬೌಲಿಂಗ್ ಮಾಡಿ 9 ವಿಕೆಟ್ ಕಬಳಿಸಿದ ಕುಲದೀಪ್ ಯಾದವ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

2-1 ಅಂತರದಿಂದ ಏಕದಿನ ಸರಣಿಯನ್ನು ಗೆದ್ದಿದ್ದ ಬಾಂಗ್ಲಾ, ಟೆಸ್ಟ್‌ ಸರಣಿಯಲ್ಲಿ 1-0 ಅಂತರದ ಹಿನ್ನಡೆ ಕಂಡಿದೆ.
 

SCROLL FOR NEXT