ಕ್ರಿಕೆಟ್

ಭಾರತ vs ದಕ್ಷಿಣ ಆಫ್ರಿಕಾ: 5ನೇ ಟಿ20 ಪಂದ್ಯ ರದ್ದು; ಶೇ.50ರಷ್ಟು ಟಿಕೆಟ್ ಹಣ ಮರುಪಾವತಿ ಎಂದ KSCA

Srinivasamurthy VN

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯ ಮಳೆಯಿಂದಾಗಿ ಸ್ಥಗಿತವಾದ ಹಿನ್ನಲೆಯಲ್ಲಿ ಪಂದ್ಯ ವೀಕ್ಷಣೆಗಾಗಿ ಬಂದಿದ್ದ ಜನರ ಟಿಕೆಟ್ ದರ ಶೇ.50ರಷ್ಟು ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹೇಳಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಭಾರತ- ದಕ್ಷಿಣ ಆಫ್ರಿಕಾ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು. ಪರಿಣಾಮ ಐದು ಪಂದ್ಯಗಳ ಟಿ20 ಸರಣಿಯು 2-2ರಿಂದ ಸಮಬಲಗೊಂಡಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಕೇವಲ ಮೂರು ಓವರ್‌ಗಳಿಗೆ ಪಂದ್ಯ ರದ್ದುಗೊಂಡ ಪರಿಣಾಮ ವಿಷಾದ ವ್ಯಕ್ತಪಡಿಸಿದೆ. 

ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಒಂದು ಎಸೆತ ಆಗಿದ್ದರೂ ಸಹ ಮರುಪಾವತಿಯ ಪ್ರಶ್ನೆ ಇರುವುದಿಲ್ಲ. ಆದಾಗ್ಯೂ ಕೆಎಸ್‌ಸಿಎ ಕ್ರಿಕೆಟ್ ಅಭಿಮಾನಿಗಳಿಗೆ ಶೇ.50ರಷ್ಟು ಹಣ ನೀಡುವುದಾಗಿ ಘೋಷಣೆ ಮಾಡುವ ಇಂಗಿತ ವ್ಯಕ್ತಪಡಿಸಿದೆ. ಹೀಗಾಗಿ ಪಂದ್ಯದಲ್ಲಿ ಪಾವತಿಸಿದ ಎಲ್ಲಾ ಟಿಕೆಟ್‌ಗಳಿಗೆ ಶೇಕಡಾ 50ರಷ್ಟು ಮೊತ್ತವನ್ನು ಮರುಪಾವತಿಸಲು ಕೆಎಸ್ ಸಿಎ ನಿರ್ಧರಿಸಿದೆ. 

ದಿನಾಂಕ, ಸಮಯ ಮತ್ತು ಸ್ಥಳದೊಂದಿಗೆ ಮರುಪಾವತಿಗೆ ಸಂಬಂಧಿಸಿದಂತೆ ವಿಧಾನಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಎಲ್ಲಾ ಪಾವತಿಸಿದ ಟಿಕೆಟ್ ಹೊಂದಿರುವವರು ಮರುಪಾವತಿಯನ್ನು ಪಡೆಯಲು ತಮ್ಮ ಮೂಲ ಟಿಕೆಟ್‌ಗಳನ್ನು ಉಳಿಸಿಕೊಳ್ಳಲು ವಿನಂತಿಸಲಾಗಿದೆ.

SCROLL FOR NEXT