ಕ್ರಿಕೆಟ್

ಟಿ20 ವಿಶ್ವಕಪ್ ನಿಂದ ಅಫ್ಘಾನಿಸ್ತಾನ ಔಟ್: ನಾಯಕತ್ವ ತ್ಯಜಿಸಿದ ಮಹಮದ್ ನಬಿ!

Srinivasamurthy VN

ಅಡಿಲೇಡ್: ಟಿ20 ವಿಶ್ವಕಪ್ ಟೂರ್ನಿಯಿಂದ ಆಫ್ಘಾನಿಸ್ತಾನ ನಿರ್ಗಮಿಸುತ್ತಿದ್ದಂತೆಯೇ ಆ ತಂಡದ ನಾಯಕತ್ವವನ್ನು ಮಹಮದ್ ನಬಿ ತ್ಯಜಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಇಂದು ನಡೆದ ಅಂತಿಮ ಪಂದ್ಯದಲ್ಲೂ ಆಫ್ಘಾನಿಸ್ತಾನ ಸೋಲಿಗೆ ತುತ್ತಾಗಿದ್ದು, ಆ ಮೂಲಕ ಹಾಲಿ ಟೂರ್ನಿಯಲ್ಲಿ ಒಂದು ಗೆಲುವು ಕಾಣದೇ ನಬಿ ಪಡೆ ಟೂರ್ನಿಯಿಂದ ನಿರ್ಗಮಿಸಿದೆ. ಇದರ ಬೆನ್ನಲ್ಲೇ ಟಿ20 ನಾಯಕತ್ವ ತ್ಯಜಿಸುವುದಾಗಿ ನಬಿ ಘೋಷಣೆ ಮಾಡಿದ್ದಾರೆ. 

37ರ ಹರೆಯದ ನಬಿ ಆಟಗಾರನಾಗಿ ಮುಂದುವರಿಯಲಿದ್ದಾರೆಯಾದರೂ ನಾಯಕತ್ವದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ. 

ಈ ಕುರಿತು ಟ್ವಿಟರ್ ಮಾಹಿತಿ ನೀಡಿರುವ ಅವರು, 'ಕಳೆದ ಒಂದು ವರ್ಷದಿಂದ ನಮ್ಮ ತಂಡದ ತಯಾರಿಯು ನಾಯಕನಿಗೆ ಬೇಕಾದ ಅಥವಾ ದೊಡ್ಡ ಪಂದ್ಯಾವಳಿಗೆ ಅಗತ್ಯವಿರುವ ಮಟ್ಟಕ್ಕೆ ಇರಲಿಲ್ಲ. ಇದಲ್ಲದೆ, ಕೆಲವು ಕೊನೆಯ ಪ್ರವಾಸಗಳಲ್ಲಿ, ತಂಡದ ಮ್ಯಾನೇಜರ್, ಆಯ್ಕೆ ಸಮಿತಿ ಮತ್ತು ನಾನು ಒಮ್ಮತದ ನಿರ್ಧಾರ ಕೈಗೊಂಡಿರಲಿಲ್ಲ. ಅದು ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿತು. ಆದ್ದರಿಂದ, ಸರಿಯಾದ ಗೌರವದಿಂದ, ತಕ್ಷಣವೇ ಜಾರಿಗೆ ಬರುವಂತೆ, ನಾನು ನಾಯಕನ ಸ್ಥಾನದಿಂದ ಕೆಳಗಿಳಿಯುವ ಕುರಿತು ಘೋಷಿಸುತ್ತೇನೆ ಮತ್ತು ನಿರ್ವಹಣೆ ಮತ್ತು ತಂಡಕ್ಕೆ ನನಗೆ ಅಗತ್ಯವಿರುವಾಗ ನನ್ನ ದೇಶಕ್ಕಾಗಿ ಆಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ಅವರು ತರಬೇತುದಾರರಾಗಿರುವ ಅಫ್ಘಾನಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದೂ ಗೆಲುವು ಇಲ್ಲದೇ ಸೂಪರ್ 12 ಹಂತವನ್ನು ಮುಗಿಸಿತು. ಈ ಹಂತದಲ್ಲಿ ಆಫ್ಘಾನಿಸ್ತಾನ ಒಟ್ಟು 5 ಪಂದ್ಯಗಳನ್ನಾಡಿದ್ದು, ಈ ಪೈಕಿ ಮೂರರಲ್ಲಿ ಸೋತಿದೆ. 2 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆಫ್ಗಾನಿಸ್ತಾನ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಆಫ್ ಸ್ಪಿನ್ನರ್ ನಬಿ, 2010 ರಲ್ಲಿ ಪದಾರ್ಪಣೆ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಅಫ್ಘಾನಿಸ್ತಾನಕ್ಕಾಗಿ 104 ಟಿ20 ಪಂದ್ಯಗಳನ್ನು ಆಡಿದ್ದಾರೆ.

SCROLL FOR NEXT