ಕ್ರಿಕೆಟ್

ಕ್ರಿಕೆಟ್ ನಲ್ಲೂ ರಾಜಕೀಯ ಬೇಡ, ಐಸಿಸಿ ಚುನಾವಣೆಗೆ ಗಂಗೂಲಿಗೆ ಅವಕಾಶ ನೀಡಿ: ಮೋದಿಗೆ ದೀದಿ ಆಗ್ರಹ

Srinivasamurthy VN

ಕೋಲ್ಕತ್ತಾ: ಕ್ರಿಕೆಟ್ ನಲ್ಲೂ ರಾಜಕೀಯ ಮಾಡಬೇಡಿ, ಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಿ.. ಕ್ರಿಕೆಟ್ ನ ಭವಿಷ್ಯದ ದೃಷ್ಟಿಯಿಂದ ಅವರು ಅತ್ಯುತ್ತಮ ಆಯ್ಕೆ ಎಂದು ಪಶ್ಚಿಮ ಬಂಗಾಳ ಸಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, 'ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿ ಅವರಿಗೆ ಅವಕಾಶ ನೀಡಬೇಕು ಎಂದು ನಾನು ಪ್ರಧಾನಿಗೆ ವಿನಂತಿಸುತ್ತೇನೆ. ಅವರು ಜನಪ್ರಿಯ ವ್ಯಕ್ತಿಯಾಗಿರುವುದರಿಂದ ಅವರು ಈ ಅವಕಾಶದಿಂದ ವಂಚಿತರಾಗಿದ್ದಾರೆ. ಮೋದಿ ಅವರೇ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ಗಂಗೂಲಿ ಅವರು ರಾಜಕೀಯ ಪಕ್ಷದ ಸದಸ್ಯರಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಸ್ಥಾನ ಪಡೆದಿರುವ ಸೌರವ್ ಗಂಗೂಲಿ ಅವರು "ವಂಚಿತರಾಗಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಇಂದು ಹೇಳಿದ್ದು, ಅವರನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಗೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸೌರವ್ ಗಂಗೂಲಿ ಅವರನ್ನು "ಅನ್ಯಾಯವಾಗಿ ಹೊರಗಿಡಲಾಗಿದೆ". ನನಗೆ ತುಂಬಾ ದುಃಖವಾಗಿದೆ. ಸೌರವ್ ಗಂಗೂಲಿ ಬಹಳ ಜನಪ್ರಿಯ ವ್ಯಕ್ತಿತ್ವ. ಅವರು ಭಾರತ ತಂಡದ ನಾಯಕರಾಗಿದ್ದರು. ಅವರು ದೇಶಕ್ಕೆ ಬಹಳಷ್ಟು ನೀಡಿದ್ದಾರೆ. ಅವರು ಬಂಗಾಳದ ಹೆಮ್ಮೆ ಮಾತ್ರವಲ್ಲ, ಭಾರತದ ಹೆಮ್ಮೆ. ಅವರನ್ನು ಏಕೆ ಹೊರಗಿಡಲಾಯಿತು? ಇದು ಅನ್ಯಾಯ..ಸೌರವ್ ಗಂಗೂಲಿ ಅವರಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕು. ಹಾಲಿ ಬಿಸಿಸಿಐ ಅದ್ಯಕ್ಷರಾಗಿರುವ ಗಂಗೂಲಿ ಅವರ ಅವಧಿ ಮುಕ್ತಾಯವಾಗುತ್ತಿದ್ದು, ಅವರ ನಂತರ ರೋಜರ್ ಬಿನ್ನಿ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಭಾರತದ ಮಾಜಿ ನಾಯಕ ಮಂಡಳಿಯ ಮುಖ್ಯಸ್ಥರಾಗಿ ಮುಂದುವರಿಯಲು ಬಯಸಿದ್ದರು. ಆದರೆ ಇತರ ಸದಸ್ಯರಿಂದ ಅವರು ಬಯಸಿದ ಬೆಂಬಲವನ್ನು ಪಡೆಯಲಿಲ್ಲ ಎಂದು ಹೇಳಲಾಗಿದೆ.
 

SCROLL FOR NEXT