ಕ್ರಿಕೆಟ್

ಟಿ20 ವಿಶ್ವಕಪ್: ಮಳೆಗೆ ಮತ್ತೊಂದು ಪಂದ್ಯ ಬಲಿ, ಆಫ್ಘಾನಿಸ್ತಾನ vs ಐರ್ಲೆಂಡ್ ಪಂದ್ಯ ಟಾಸ್ ಇಲ್ಲದೇ ರದ್ದು!

Srinivasamurthy VN

ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಮಳೆಕಾಟ ಮುಂದುವರೆದಿದ್ದು ಇಂದೂ ಕೂಡ ಮಳೆ ಕಾರಣದಿಂದಾಗಿ ಮತ್ತೊಂದು ಪಂದ್ಯ ರದ್ದಾಗಿದೆ.

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಗ್ರೂಪ್ ಆಫ್ಘಾನಿಸ್ತಾನ vs ಐರ್ಲೆಂಡ್ ತಂಡಗಳ ನಡುವಿನ ಮೊದಲ ಪಂದ್ಯ ಟಾಸ್ ಕೂಡ ಕಾಣದೇ ರದ್ದಾಗಿದೆ. ಹೀಗಾಗಿ ಉಭಯ ತಂಡಗಳಿಗೆ ನಿಯಮಾನುಸಾರ ತಲಾ ಒಂದೊಂದು ಅಂಕ ಹಂಚಲಾಗಿದೆ. 

ಈ ಕುರಿತು ಮಾತನಾಡಿರುವ ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಾಲ್ಬಾರ್ನಿ, 'ನಿಜಕ್ಕೂ ತುಂಬಾ ನಿರಾಶಾದಾಯಕ. ನಾವು ಈ ಹಿಂದೆ ಉತ್ತಮ ಕ್ರಿಕೆಟ್ ಆಡಿದ್ದೇವೆ ಮತ್ತು ನಮಗೆ ಚೆನ್ನಾಗಿ ತಿಳಿದಿರುವ ತಂಡದ ವಿರುದ್ಧ ಈ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೆವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾವು ಟೂರ್ನಿಯಲ್ಲಿ ಮುಂದಿನ ಸುತ್ತಿಗೆ ಹೋಗುವ ಭರವಸೆಯೊಂದಿಗೆ ಬ್ರಿಸ್ಬೇನ್‌ಗೆ ಹೋಗಬಹುದಿತ್ತು. ಆದರೆ ಹವಾಮಾನದ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ನಾವು ಇನ್ನೂ ಎರಡು ಪಂದ್ಯಗಳನ್ನು ಹೊಂದಿದ್ದು, ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಆಫ್ಘಾನಿಸ್ತಾನ ತಂಡದ ನಾಯಕ ಮಹಮದ್ ನಬಿ ಮಾತನಾಡಿ ಇಂತಹ ಅದ್ಭುತ ಮೈದಾನದಲ್ಲಿ ಆಡದೇ ಇರುವುದಕ್ಕೆ ತುಂಬಾ ನಿರಾಸೆಯಾಗಿದೆ. ನಾನು ಮತ್ತು ರಶೀದ್ ಇಲ್ಲಿ ಸಾಕಷ್ಟು BBL ಪಂದ್ಯಗಳನ್ನು ಆಡಿದ್ದೇವೆ. ಅಲ್ಲದೆ ತಂಡದ ಹೆಚ್ಚಿನ ಆಟಗಾರರು ಇಲ್ಲಿ ಆಡಲು ಕಾಯುತ್ತಿದ್ದಾರೆ. ಆದರೆ ಅದು ನಮ್ಮ ಕೈಯಲ್ಲಿಲ್ಲ ಮತ್ತು ಮುಂಬರುವ ಪಂದ್ಯಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪಟ್ಟಿಯಲ್ಲಿ 3 ಪಂದ್ಯಗಳನ್ನಾಡಿರುವ ಐರ್ಲೆಂಡ್ ತಂಡ 1ರಲ್ಲಿ ಗೆದ್ದು, 1ರಲ್ಲಿ ಸೋತಿದೆ. ಒಂದು ಪಂದ್ಯ ರದ್ದಾಗಿದ್ದು, ಒಟ್ಟು 3 ಅಂಕಗಳೊಂದಿಗೆ ಗ್ರೂಪ್ 1 ನಲ್ಲಿ 2ನೇ ಸ್ಥಾನದಲ್ಲಿದೆ, ಅಂತೆಯೇ ಆಫ್ಘಾನಿಸ್ತಾನ ಮೂರು ಪಂದ್ಯಗಳ ಪೈಕಿ 1ರಲ್ಲಿ ಸೋತಿದ್ದು 2ಪಂದ್ಯ ರದ್ದಾಗಿ 2 ಅಂಕಗಳೊಂದಿಗೆ ಇದೇ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 
 

SCROLL FOR NEXT