ಕ್ರಿಕೆಟ್

ಆಸಿಸ್‌ಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್‌ಗೆ ವಿದಾಯ

Srinivasamurthy VN

ಮೆಲ್ಬರ್ನ್: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮತ್ತು 2021ರಲ್ಲಿ ಕಾಂಗರೂಗಳಿಗೆ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಆ್ಯರನ್‌ ಫಿಂಚ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಮುಂದಿನ ವರ್ಷ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಭಾರತದಲ್ಲಿ ಆಯೋಜನೆಗೊಳ್ಳಲಿದ್ದು, ಅದಕ್ಕೂ ಮುನ್ನವೇ ಫಿಂಚ್‌ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ, ಈ ವರ್ಷ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮೂಲಗಳು ತಿಳಿಸಿವೆ.

ನಿವೃತ್ತಿ ಕುರಿತು ಮಾತನಾಡಿರುವ ಫಿಂಚ್, ತಂಡದ ಜೊತೆಗಿನ ಪಯಣವು ನಂಬಲಸಾಧ್ಯವಾದ ಹಲವು ನೆನಪುಗಳನ್ನು ಹೊಂದಿದೆ. ಅತ್ಯುತ್ತಮ ಏಕದಿನ ತಂಡದ ಭಾಗವಾಗಿದ್ದ ನಾನು ಅದೃಷ್ಠಶಾಲಿ. ನನ್ನೊಂದಿಗೆ ಆಡಿದ ಎಲ್ಲರೂ ಹಾಗೂ ತೆರೆಮರೆಯಲ್ಲಿ ಸಾಕಷ್ಟು ಮಂದಿ ನನಗೆ ಶುಭ ಹಾರೈಸಿದ್ದಾರೆ. ನನ್ನ ಈವರೆಗಿನ ಪ್ರಯಾಣವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಇದು ಮುಂದಿನ (ಏಕದಿನ) ವಿಶ್ವಕಪ್‌ ಟೂರ್ನಿಗೆ ಸಿದ್ಧತೆ ನಡೆಸಲು ಮತ್ತು ಪ್ರಶಸ್ತಿ ಗೆಲ್ಲಲು ಹೊಸ ನಾಯಕನಿಗೆ ಅವಕಾಶ ಕಲ್ಪಿಸುವ ಸಮಯವಾಗಿದೆ ಎಂದೂ ಹೇಳಿದ್ದಾರೆ.

ಫಿಂಚ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಸದ್ಯ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದು, ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂತಿಮ ಪಂದ್ಯವು ಕ್ಯಾನ್ಸ್‌ನಲ್ಲಿ ನಾಳೆ (ಭಾನುವಾರ) ನಡೆಯಲಿದೆ. ಫಿಂಚ್‌ ಆಡುವ ಕೊನೆಯ ಏಕದಿನ ಟೂರ್ನಿ ಇದಾಗಿದೆ. 35 ವರ್ಷದ ಫಿಂಚ್‌ ಆಸ್ಟ್ರೇಲಿಯಾ ಪರ 145 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 39.14ರ ಸರಾಸರಿಯಲ್ಲಿ 5,401ರನ್ ಕಲೆಹಾಕಿದ್ದಾರೆ. ಈ ಪೈಕಿ 54 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು 30 ಗೆಲುವು ತಂದುಕೊಟ್ಟಿದ್ದಾರೆ. 

35 ವರ್ಷ ವಯಸ್ಸಿನ ಫಿಂಚ್ ತಮ್ಮ 146 ನೇ ಮತ್ತು ಅಂತಿಮ ODI ಅನ್ನು ಭಾನುವಾರ ಕೇರ್ನ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದ್ದಾರೆ, ಏಕದಿನ ಕ್ರಿಕೆಟ್ ನಲ್ಲಿ 5,401 ರನ್ ಗಳಿಸಿದ ಫಿಂಚ್ ಅತ್ಯುತ್ತಮ ವೃತ್ತಿಜೀವನವನ್ನು ನಿರ್ಮಿಸಿದ್ದಾರೆ.
 

SCROLL FOR NEXT