ಕ್ರಿಕೆಟ್

ಚೊಚ್ಚಲ ಮಹಿಳಾ ಐಪಿಎಲ್: ಆಟಗಾರ್ತಿಯರಿಗೆ ಮೂಲಬೆಲೆ ನಿಗದಿ, ನೋಂದಣಿಗೆ ಜ.26 ಅಂತಿಮ ದಿನಾಂಕ: ಬಿಸಿಸಿಐ ಮೂಲಗಳು

Srinivasamurthy VN

ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಮಹಿಳಾ ಐಪಿಎಲ್ ಟೂರ್ನಿಗೆ ಭರದ ಸಿದ್ಧತೆ ನಡೆದ್ದಿದ್ದು, ಆಟಗಾರ್ತಿಯರಿಗೆ ಮೂಲಬೆಲೆ ನಿಗದಿಪಡಿಸಲಾಗಿದ್ದು ಮತ್ತು ಆಟಗಾರ್ತಿಯರ ನೋಂದಣಿಗೆ ಜನವರಿ 26 ಅಂತಿಮ ದಿನವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐ ಈಗಾಗಲೇ ಮಹಿಳಾ ಐಪಿಎಲ್‌ ನಡೆಸಲು ಸಿದ್ಧತೆ ನಡೆಸಿದ್ದು, ಈ ಸ್ಪರ್ಧೆಯಲ್ಲಿ ಐದು ತಂಡಗಳು ಪಾಲ್ಗೊಳ್ಳಲಿದ್ದು, ಆಟಗಾರ್ತಿಯರ ಖರೀದಿಗೆ ಟೆಂಡರ್‌ ಬಿಡುಗಡೆ ಮಾಡಲಾಗಿದೆ. ಫೆಬ್ರವರಿಯಲ್ಲಿ ನಡೆಯುವ ಹರಾಜಿನ ಮೂಲಕ ಆಟಗಾರ್ತಿಯರನ್ನು ಫ್ರಾಂಚೈಸಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಭಾರತೀಯ ಆಟಗಾರ್ತಿಯರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಲು ಜನವರಿ 26 ಅಂತಿಮದಿನವಾಗಿದೆ.

ವನಿತಾ ಐಪಿಎಲ್‌ ಮಾ.3ರಿಂದ 26ರವರೆಗೆ ನಡೆಯುವ ನಿರೀಕ್ಷೆಯಿದೆ. ರಾಜಸ್ಥಾನ್‌ ರಾಯಲ್ಸ್‌, ಮುಂಬೈ ಇಂಡಿಯನ್ಸ್‌, ಕೋಲ್ಕತ ನೈಟ್‌ ರೈಡರ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ವನಿತಾ ತಂಡವನ್ನು ರಚಿಸುವ ಬಗ್ಗೆ ಆಸಕ್ತಿ ವಹಿಸಿವೆ ಎನ್ನಲಾಗಿದೆ.

ಆಟಗಾರ್ತಿಯರಿಗೆ ಮೂಲಬೆಲೆ ನಿಗದಿ
ಇನ್ನು ಟೆಸ್ಟ್‌ ಅಥವಾ ಏಕದಿನ ಪಂದ್ಯವನ್ನಾಡಿದ ಆಟಗಾರ್ತಿಯರ ಮೂಲ ಬೆಲೆಯನ್ನು 30 ಲಕ್ಷ ರೂ., 40 ಲಕ್ಷ ರೂ. ಮತ್ತು 50 ಲಕ್ಷ ರೂ. ಹಾಗೂ ಇತರ ಆಟಗಾರ್ತಿಯರ ಮೂಲ ಬೆಲೆಯನ್ನು 20 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ, ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮಹಿಳಾ ಐಪಿಎಲ್ 2023 ರಲ್ಲಿ ಚಾಲನೆಯಾಗಲಿದೆ ಎಂದು  ಹೇಳಿದ್ದರು. 
 

SCROLL FOR NEXT