ಕ್ರಿಕೆಟ್

4ನೇ ಟೆಸ್ಟ್: ಟೀ ವಿರಾಮದ ವೇಳೆಗೆ ಭಾರತ 472/5, ಆಸ್ಟ್ರೇಲಿಯಾ ವಿರುದ್ಧ 8 ರನ್ ಹಿನ್ನಡೆ

Srinivasamurthy VN

ಅಹ್ಮದಾಬಾದ್: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ತಿರುಗೇಟು ನೀಡಿರುವ ಭಾರತ ತಂಡ ಟೀಂ ವಿರಾಮದ ವೇಳೆಗೆ 5 ವಿಕೆಟ್  ನಷ್ಟಕ್ಕೆ 472 ರನ್ ಗಳಿಸಿದೆ. ಆ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾಗಿಂತ ಕೇವಲ 8 ರನ್ ಗಳ ಹಿನ್ನಡೆಯಲ್ಲಿದೆ.

ಪಂದ್ಯದ 4ನೇ ದಿನವೂ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಆಸ್ಟ್ರೇಲಿಯಾಗೆ ದಿಟ್ಟ ಉತ್ತರ ನೀಡಿದೆ. ಇಂದು ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಶತಕ ಬರ ನೀಗಿಸಿಕೊಂಡರು. ಕೊಹ್ಲಿ 291 ಎಸೆತಗಳಲ್ಲಿ 135 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕೊಹ್ಲಿಯ ಇಂದಿನ ಶತಕ ಸುದೀರ್ಘ 41 ಇನ್ನಿಂಗ್ಸ್ ಗಳ ಅಂತರದಲ್ಲಿ ಬಂದಿದ್ದು, ಕೊಹ್ಲಿ ತಮ್ಮ 28ನೇ ಟೆಸ್ಟ್ ಶತಕಕ್ಕಾಗಿ ಬರೊಬ್ಬರಿ 41 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ. 

ಇನ್ನು ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಶ್ರೀಕಾರ್ ಭರತ್ 44 ರನ್ ಗಳಿ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರೆ ಬಳಿಕ ಬಂದ ಅಕ್ಸರ್ ಪಟೇಲ್ 38 ರನ್ ಗಳಿ ಅಜೇಯರಾಗಿ ಉಳಿದು ಕೊಹ್ಲಿಗೆ ಉತ್ತಮ ಸಾಥ್ ನೀಡಿದ್ದಾರೆ. ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 472 ರನ್ ಗಳಿಸಿದ್ದು, ಆಸ್ಟ್ರೇಲಿಯಾಗಿಂತ ಇನ್ನೂ 8 ರನ್ ಗಳ ಹಿನ್ನಡೆಯಲ್ಲಿದೆ.

ಇನ್ನು ಆಸ್ಟ್ರೇಲಿಯಾ ಪರ ನಾಥನ್ ಲೈಯಾನ್ ಮತ್ತು ಟಾಡ್ ಮರ್ಫಿ ತಲಾ 2 ವಿಕೆಟ್ ಪಡೆದಿದ್ದು, ಕುಹ್ನೆಮನ್ 1 ವಿಕೆಟ್ ಪಡೆದಿದ್ದಾರೆ.
 

SCROLL FOR NEXT