ಕ್ರಿಕೆಟ್

ಮುಂದಿನ ಸಲ ಕಪ್ ನಮ್ದೇ: ಯುಪಿ ವಾರಿಯರ್ಸ್ ಗೆ ಗೆಲುವು; RCB ಮಹಿಳಾ ತಂಡ ಪ್ಲೇಆಫ್ ನಿಂದ ಹೊರಕ್ಕೆ!

Vishwanath S

ಮುಂಬೈ: ವುಮೆನ್ಸ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡ ರೋಚಕ ಜಯ ಗಳಿಸಿದ್ದು ಈ ಗೆಲುವಿನ ಮೂಲಕ ಯುಪಿ ವಾರಿಯರ್ಸ್ ಪ್ಲೇ ಆಫ್ ಹಂತಕ್ಕೇರಿದೆ. 

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಜೈಂಟ್ಸ್ ತಂಡ ನಿಗದಿತ ಓವರ್ ನಲ್ಲಿ 178 ರನ್ ಗಳಿಗೆ ಆಲೌಟ್ ಆಗಿತ್ತು. ಇನ್ನು 179 ರನ್ ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ಕೊನೆಯ ಓವರ್ ನಲ್ಲಿ ಒಂದು ಎಸೆತ ಬಾಕಿ ಇರುವಂತೆ 181 ರನ್ ಪೇರಿಸುವ ಮೂಲಕ ಗೆಲುವಿನ ನಗೆ ಬೀರಿತು. 

ಗುಜರಾತ್ ಜೈಂಟ್ಸ್ ಪರ ಸೋಫಿಯಾ ಡಂಕ್ಲಿ 23, ಲಾರಾ ವೊಲ್ವಾರ್ಡ್ಟ್ 17, ದಯಾಳನ್  ಹೇಮಲತಾ 57 ಆಶ್ಲೀಗ್ ಗಾರ್ಡ್ನರ್ 60 ರನ್ ಬಾರಿಸಿದ್ದಾರೆ. ಯುಪಿ ವಾರಿಯರ್ಸ್ ಪರ ಬೌಲಿಂಗ್ ನಲ್ಲಿ ರಾಜೇಶ್ವರಿ ಗಾಯಕ್ವಾಡ್ ಮತ್ತು ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಪಡೆದಿದ್ದಾರೆ. 

ಯುಪಿ ವಾರಿಯರ್ಸ್ ಪರ ಗ್ರೇಸ್ ಹ್ಯಾರಿಸ್ 72 ತಾಲಿಯಾ ಮೆಕ್‌ಗ್ರಾತ್ 57 ರನ್ ಬಾರಿಸಿ ತಂಡವನ್ನು ಗೆಲುವಿನ ಲಯಕ್ಕೆ ಮರಳಿಸಿದರು. ಅಂತಿಮವಾಗಿ ಸೋಫಿ ಎಕ್ಲೆಸ್ಟೋನ್ ಅಜೇಯ 19 ರನ್ ಗಳೊಂದಿಗೆ ತಂಡವನ್ನು ಗೆಲುವಿನ ದಡ ಸೇರಿದರು. 

ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಸೋತಿದ್ದರೆ ಆರ್ ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಸಣ್ಣ ಅವಕಾಶವಿತ್ತು. ಅದು ಸಾಧ್ಯವಾಗಬೇಕಿದ್ದರೆ ಯುಪಿ ವಾರಿಯರ್ಸ್ ತಂಡ ಮುಂದಿನ ಎರಡು ಪಂದ್ಯಗಳಲ್ಲೂ ಸೋಲಬೇಕಿತ್ತು. ಇನ್ನು ಆರ್ ಸಿಬಿ ತಂಡ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಬೇಕಿತ್ತು. ಆದರೆ ಯುಪಿ ವಾರಿಯರ್ಸ್ ತಂಡ ಗೆಲುವಿನೊಂದಿಗೆ ಆರ್ ಸಿಬಿ ಪ್ಲೇಆಪ್ ಕನಸು ಕಮರಿದೆ.

SCROLL FOR NEXT