ಕ್ರಿಕೆಟ್

ಸುದ್ದಿಗೋಷ್ಠಿಯಲ್ಲಿ ಕೋಪಗೊಂಡ ಶ್ರೇಯಸ್ ಅಯ್ಯರ್! ವರದಿಗಾರರ ಮೇಲೆ ಸಿಡಿಮಿಡಿ- ವಿಡಿಯೋ

Nagaraja AB

ಮುಂಬೈ: ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ 302 ರನ್‌ಗಳ ಅಂತರಿಂದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ ಶ್ರೇಯಸ್ ಅಯ್ಯರ್, ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರನ ಮೇಲೆ ಸಿಡಿಮಿಡಿಗೊಂಡ ಘಟನೆ ನಡೆದಿದೆ. 

ಇತ್ತೀಚಿನ ದಿನಗಳಲ್ಲಿ, ಅಯ್ಯರ್ ಪುಲ್ ಶಾಟ್ ಆಡುವ ಪ್ರಯತ್ನದಲ್ಲಿ ಹಲವು  ಬಾರಿ ವಿಕೆಟ್ ಕಳೆದುಕೊಂಡಿದ್ದರು. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ  ಇದು ಗಮನಕ್ಕೆ ಬಂದಿತು. ಆದರೆ, ಲಂಕಾ ವಿರುದ್ಧ ಪಂದ್ಯದಲ್ಲಿ ಅಯ್ಯರ್ ಮಧ್ಯಮ ಓವರ್‌ಗಳಲ್ಲಿ 82 ರನ್ ಗಳಿಸಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ  8 ವಿಕೆಟ್ ನಷ್ಟಕ್ಕೆ 357 ರಷ್ಟು ಬೃಹತ್ ರನ್ ಗಳಿಸುವಲ್ಲಿ ನೆರವಾದರು.  ಅವರು ತಮ್ಮ ಬತ್ತಳಿಕೆಯಿಂದ ವಿವಿಧ ಹೊಡೆತಗಳನ್ನು ಪ್ರದರ್ಶಿಸಿದರು, ಇದರಲ್ಲಿ ಪುಲ್ ಶಾಟ್‌ಗಳೂ ಸೇರಿದ್ದವು.

ಪಂದ್ಯ ಮುಗಿದ ನಂತರ ಶ್ರೇಯಸ್ ಅಯ್ಯರ್ ಪ್ರಶ್ನಿಸಿದ ಪತ್ರಕರ್ತರು, ನಿಮಗೆ ಶಾರ್ಟ್ ಬಾಲ್‌ನಲ್ಲಿ ಆಡಲು ತೊಂದರೆ ಆಗುತ್ತಿದೆಯೇ? ಎಂದು ಕೇಳಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟ ಅಯ್ಯರ್, ಏನು ಶಾರ್ಟ್ ಬಾಲ್ ಪ್ರಾಬ್ಲಂ? ನನಗೆ ಯಾವುದೇ ತೊಂದರೆ ಇಲ್ಲ. ನನಗೆ ಶಾರ್ಟ್ ಆಡಲು ತೊಂದರೆ ಇದೆ ಎಂದು ನೀವೇ ಹೊರಗೆ ಹಬ್ಬಿಸಿದ್ದಾರೆ. ನಾನು ಸಾಕಷ್ಟು ಪುಲ್ ಶಾಟ್‌ಗಳನ್ನು ಆಡಿದ್ದೇನೆ ಮತ್ತು ಬೌಂಡರಿಗಳನ್ನು ಸಹ ಹೊಡೆದಿದ್ದೇನೆ. ಕೆಲವೊಮ್ಮೆ ನಿರೀಕ್ಷಿಸಿದಂತೆ ನಡೆಯುವುದಿಲ್ಲ ಅಷ್ಟೇ. ಆದರೆ ನನ್ನಲ್ಲಿ ಶಾರ್ಟ್ ಬಾಲ್ ಸವಾಲನ್ನು ಎದುರಿಸುವ ವಿಶ್ವಾಸವಿದೆ ಎಂದು ಕೋಪದಲ್ಲಿ ಹೇಳಿದ್ದಾರೆ.

ಈ ಬಾರಿಯ ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಯ್ಯರ್ ಕಡೆಯಿಂದ ನಿರೀಕ್ಷೆಗೆ ತಕ್ಕಂತ ಆಟ ಬಂದಿರಲಿಲ್ಲ. ಇದರಿಂದ ಟೀಕೆಗಳಿಗೆ ಒಳಗಾಗಿದ್ದರು. ಆದರೆ, ಲಂಕಾ ವಿರುದ್ಧ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಶ್ರೇಯಸ್ ಕೇವಲ 56 ಎಸೆತಗಳಲ್ಲಿ 3 ಫೋರ್, 6 ಸಿಕ್ಸರ್​ನೊಂದಿಗೆ 82 ರನ್ ಗಳಿಸುವ ಮೂಲಕ ಭಾರತ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. 

SCROLL FOR NEXT