ಕ್ರಿಕೆಟ್

ವಾಂಖೆಡೆ ಸ್ಟೇಡಿಯಂನಲ್ಲಿ IND vs NZ Semi-final: ಬೆದರಿಕೆ ಸಂದೇಶ ಕಳುಹಿಸಿದ ಯುವಕನ ಬಂಧನ

Ramyashree GN

ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ಅಹಿತಕರ ಘಟನೆ ನಡೆಯಲಿದೆ ಎಂದು ಟ್ವಿಟರ್‌ನಲ್ಲಿ ಬಂದ ಬೆದರಿಕೆ ಸಂದೇಶದ ನಂತರ ಮುಂಬೈ ಪೊಲೀಸರು ಬಿಗಿಭದ್ರತೆಯನ್ನು ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯಿಂದ ಟ್ವಿಟರ್‌ನಲ್ಲಿ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ವಾಂಖೆಡೆ ಕ್ರೀಡಾಂಗಣದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮುಂಬೈ ಪೊಲೀಸರು ಬುಧವಾರ ತಿಳಿಸಿದ್ದಾರೆ. ಇಂದು ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ನ ಬಹು ನಿರೀಕ್ಷಿತ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ಅಹಿತಕರ ಘಟನೆ ಕುರಿತು ಸಂದೇಶ ಬಂದಿತ್ತು ಎಂದು ಮುಂಬೈ ಪೊಲೀಸರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಬೆದರಿಕೆ ಸಂದೇಶದೊಂದಿಗೆ ಬಂದೂಕುಗಳು, ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಬುಲೆಟ್‌ಗಳನ್ನು ಪ್ರದರ್ಶಿಸುವ ಚಿತ್ರವನ್ನು ಅನಾಮಧೇಯ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದು, 'ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ವೇಳೆ ಅಹಿತಕರ ಘಟನೆಯನ್ನು ಸೃಷ್ಟಿಸಲಾಗುವುದು ಎಂದು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಹೀಗಾಗಿ, ಸ್ಟೇಡಿಯಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಟ್ಟೆಚ್ಚರವನ್ನು ಜಾರಿಗೊಳಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಈ ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ ಲಾತೂರ್ ಜಿಲ್ಲೆಯ 17 ವರ್ಷದ ಯುವಕನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಬೆದರಿಕೆ ಸಂದೇಶವನ್ನು ಏಕೆ ಪೋಸ್ಟ್ ಮಾಡಿದ ಎಂಬುದು ಇನ್ನೂ ಖಚಿತವಾಗಿಲ್ಲ' ಎಂದು ಅವರು ಹೇಳಿದರು.

SCROLL FOR NEXT